ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಖುಲಾಸೆ

Update: 2019-09-14 14:43 GMT

ಮಂಗಳೂರು, ಸೆ.14: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ 2016ರ ಮೇ 8ರಂದು ನಡೆದ ರೋಹಿತ್ ಕೊಲೆ ಹಾಗೂ ಆತನ ಸ್ನೇಹಿತ ರೋಶನ್ ರೋಚ್ ಕೊಲೆಯತ್ನ ಪ್ರಕರಣದ ನಾಲ್ವರು ಆರೋಪಿಗಳನ್ನು ಆರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.

ಆರೋಪಿಗಳಾದ ಜಗದೀಶ್, ಶಿವಾಜಿ, ಗೌತಮ್‌ಚಂದ್ರ, ಯಶವಂತ ಅವರು ಸೂಕ್ತ ಸಾಕ್ಷಿಗಳ ಕೊರತೆಯಿಂದ ದೋಷಮುಕ್ತಗೊಂಡಿದ್ದಾರೆ.

ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ 2016ರ ಮೇ 8ರಂದು ಸಂಜೆ ತನ್ನ ಸ್ನೇಹಿತನ ಜತೆ ಎಜೆ ಆಸ್ಪತ್ರೆಗೆ ತೆರಳಲು ಆಟೋ ರಿಕ್ಷಾಕ್ಕೆ ಕಾಯುತ್ತಿದ್ದ ರೋಹಿತ್ ಅವರನ್ನು ಬಿಜೈ ಚರ್ಚ್ ಕಡೆಯಿಂದ ಆಗಮಿಸಿದ ಆರೋಪಿಗಳು ಹೊಟ್ಟೆಭಾಗಕ್ಕೆ ತಿವಿದು, ಮರದ ಸೋಂಟೆ, ಕಲ್ಲುಗಳಿಂದ ಹೊಡೆದು ಕೊಲೆ ಮಾಡಿದ್ದರು. ರೋಶನ್ ರೋಚ್ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿದ್ದರು. ಈ ಬಗ್ಗೆ ನಾಲ್ವರು ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಸೂಕ್ತ ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ಆರೋಪಿಗಳ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ರಾಘವೇಂದ್ರ ರಾವ್, ಕೆ.ಗೌರಿ ಶೆಣೈ, ಸುಪ್ರಿಯಾ ಆಚಾರ್ಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News