ಮೆಸ್ಕಾಂ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ: ​ಪುತ್ತೂರು ಪುರಸಭಾ ಮಾಜಿ ಅಧ್ಯಕ್ಷ ಸೆರೆ

Update: 2019-09-14 14:54 GMT

ಪುತ್ತೂರು: ವಿದ್ಯುತ್ ಲೈನ್‍ಗೆ ತಾಗಿಕೊಂಡಿರುವ ಮರದ ಕೊಂಬೆಗಳನ್ನು ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ಮೆಸ್ಕಾ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ದೂರಿಗೆ ಸಂಬಂಧಿಸಿ ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ಗಣೇಶ್ ರಾವ್ ಎಂಬಾತನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು ಪಡೀಲಿನ ಕನಕದಾಸ ಕಾಲನಿಯಲ್ಲಿ ಶುಕ್ರವಾರ ಮರದ ಕೊಂಬೆಗಳನ್ನು ಕಡಿಯುತ್ತಿದ್ದ ಮೆಸ್ಕಾಂ ಪವರ್ ಮ್ಯಾನ್, ಇಲ್ಲಿನ ಶಾಂತಿಗೋಡು ನಿವಾಸಿ ಐತ್ತಪ್ಪ ಎಂಬವರಿಗೆ ಮರದ ವಾರಸುದಾರ ಗಣೇಶ್ ರಾವ್ ನಿಂದಿಸಿ, ಗರಗಸಕ್ಕೆ ಹಾನಿ ಮಾಡಿದ್ದಲ್ಲದೆ ಜೀವಬೆದರಿಕೆ ಒಡ್ಡಿರುವುದಾಗಿ ದೂರು ನೀಡಲಾಗಿತ್ತು.

ಆರೋಪಿ ಗಣೇಶ್ ರಾವ್ ತನ್ನ ಕೌಂಪೌಂಡ್ ಬದಿಯಲ್ಲಿದ್ದ ತೆಂಗಿನ ಮರದ ಗರಿ ಮತ್ತು ಹಲಸಿನ ಮರದ ಕೊಂಬೆಯನ್ನು ಕಡಿದ ವಿಚಾರವಾಗಿ ಪವರ್ ಮ್ಯಾನ್ ಐತ್ತಪ್ಪ ಅವರಲ್ಲಿದ್ದ ಗರಗಸವನ್ನು ತುಂಡು ಮಾಡಿದ್ದು, ಇದರಿಂದ 18 ಸಾವಿರ ರೂ. ನಷ್ಟ ಸಂಭವಿಸಿದೆ, ಮೆಸ್ಕಾಂ ಸಿಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ದೂರಿಗೆ ಸಂಬಂಧಿಸಿ ಪುತ್ತುರು ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ, ಆರೋಪಿ ಗಣೇಶ್ ರಾವ್ ನನ್ನು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News