ಜೈಲು ಶಿಕ್ಷೆ ಮುಗಿದರೂ ಜೈಲಿನಲ್ಲೇ ಅಸಾಂಜ್ ವಾಸ: ನ್ಯಾಯಾಲಯ

Update: 2019-09-14 14:58 GMT

ಲಂಡನ್, ಸೆ. 14: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರ ಜೈಲು ವಾಸದ ಅವಧಿ ಮುಗಿದರೂ, ಅವರ ‘ನಾಪತ್ತೆಯಾಗುವ ಇತಿಹಾಸ’ದ ಹಿನ್ನೆಲೆಯಲ್ಲಿ ಅವರು ಜೈಲಿನಲ್ಲೇ ಉಳಿಯುತ್ತಾರೆ ಎಂದು ನ್ಯಾಯಾಧೀಶರೊಬ್ಬರು ಶುಕ್ರವಾರ ಹೇಳಿದ್ದಾರೆ.

ಜಾಮೀನು ಶರತ್ತುಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಸಾಂಜ್‌ರ ಶಿಕ್ಷೆ ಸೆಪ್ಟಂಬರ್ 22ರಂದು ಮುಕ್ತಾಯಗೊಳ್ಳಲಿದೆ. ಆದರೆ, ಅವರು ಮತ್ತೊಮ್ಮೆ ನಾಪತ್ತೆಯಾಗುತ್ತಾರೆ ಎಂದು ಭಾವಿಸಲು ‘ಸಾಕಷ್ಟು ಆಧಾರಗಳಿವೆ’ ಎಂಬುದಾಗಿ ವೆಸ್ಟ್‌ ಮಿನ್‌ ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಅಮೆರಿಕದ ಸರಕಾರಿ ರಹಸ್ಯಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಅವರು ಅಮೆರಿಕಕ್ಕೆ ಗಡಿಪಾರಾಗುವ ಸಾಧ್ಯತೆಯನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧದ ಸಮಗ್ರ ಗಡಿಪಾರು ವಿಚಾರಣೆ 2020 ಫೆಬ್ರವರಿ 25ರಂದು ಆರಂಭಗೊಳ್ಳಲಿದೆ. ಅವರ ವಿರುದ್ಧದ ಗಡಿಪಾರು ಮನವಿಗೆ ಬ್ರಿಟನ್‌ನ ಹಿಂದಿನ ಗೃಹ ಕಾರ್ಯದರ್ಶಿ ಸಾಜಿದ್ ಜಾವೇದ್ ಜೂನ್‌ನಲ್ಲಿ ಸಹಿ ಹಾಕಿದ್ದಾರೆ.

ಜಾಮೀನು ಕಾಯ್ದೆಯನ್ನು ಉಲ್ಲಂಘಿಸಿರುವುದು ಎಪ್ರಿಲ್‌ನಲ್ಲಿ ಸಾಬೀತಾದ ಬಳಿಕ ಅವರು ಲಂಡನ್‌ನ ಬೆಲ್ಮರ್ಶ್ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸ್ವೀಡನ್‌ಗೆ ಗಡಿಪಾರಾಗುವುದನ್ನು ತಪ್ಪಿಸಲು ಅಸಾಂಜ್ 2012ರಿಂದ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದರು. ಈ ವರ್ಷದ ಎಪ್ರಿಲ್‌ನಲ್ಲಿ ಅವರಿಗೆ ನೀಡಲಾಗಿದ್ದ ಆಶ್ರಯವನ್ನು ಇಕ್ವೆಡಾರ್ ಹಿಂದಕ್ಕೆ ಪಡೆದುಕೊಂಡಿತು. ಆಗ ಲಂಡನ್ ಪೊಲೀಸರು ಅವರನ್ನು ರಾಯಭಾರ ಕಚೇರಿಯಿಂದಲೇ ಬಂಧಿಸಿ ಒಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News