ಇಟಲಿ: ಹೈನುಗಾರಿಕೆ ಗೊಬ್ಬರ ಗುಂಡಿಗೆ ಬಿದ್ದು 4 ಭಾರತೀಯರ ಸಾವು

Update: 2019-09-14 15:01 GMT

ರೋಮ್ (ಇಟಲಿ), ಸೆ. 14: ಉತ್ತರ ಇಟಲಿಯ ಪಾವಿಯ ಎಂಬ ನಗರದ ಸಮೀಪದಲ್ಲಿರುವ ಹೈನುಗಾರಿಕಾ ಕ್ಷೇತ್ರವೊಂದರ ಗೊಬ್ಬರ ಗುಂಡಿಗೆ ಬಿದ್ದು ಪಂಜಾಬ್‌ನ ನಾಲ್ವರು ಸಿಖ್ಖರು ಮೃತಪಟ್ಟಿದ್ದಾರೆ.

ದನದ ಗೊಬ್ಬರದಿಂದ ಹೊಮ್ಮುತ್ತಿದ್ದ ಇಂಗಾಲದ ಡೈ ಆಕ್ಸೈಡ್ ಹೊಗೆಯನ್ನು ಸೇವಿಸಿ ಅವರು ಪ್ರಜ್ಞೆ ಕಳೆದುಕೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಓರ್ವ ಕೆಲಸಗಾರ ಪ್ರಜ್ಞಾಹೀನನಾಗಿ ಬಿದ್ದಾಗ ಅವರನ್ನು ರಕ್ಷಿಸಲು ಉಳಿದವರು ಗುಂಡಿಗೆ ಹಾರಿರಬಹುದು ಎಂದು ಅವರು ಭಾವಿಸಿದ್ದಾರೆ.

ನಾಲ್ವರ ಪೈಕಿ ಇಬ್ಬರು ಹೈನುಗಾರಿಕೆ ಫಾರ್ಮ್‌ನ ಮಾಲೀಕರಾಗಿದ್ದಾರೆ ಹಾಗೂ ಇತರ ಇಬ್ಬರು ಕೆಲಸಗಾರರಾಗಿದ್ದಾರೆ. ಸಹೋದರರಾದ ಪ್ರೇಮ್ ಮತ್ತು ತರ್ಸೀಮ್ ಸಿಂಗ್ 2017ರಲ್ಲಿ ತಮ್ಮ ಫಾರ್ಮನ್ನು ನೋಂದಾಯಿಸಿದ್ದರು.

ಅರೇನಾ ಪೋ ಎಂಬಲ್ಲಿರುವ ಈ ಹಾಲು ಮತ್ತು ಮಾಂಸ ಉತ್ಪಾದನೆಯ ಫಾರ್ಮ್ ಪಾವಿಯ ಪ್ರದೇಶದಲ್ಲೇ ಅತಿ ದೊಡ್ಡದಾಗಿತ್ತು ಎಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ.

ಈ ನಾಲ್ವರು ಗುರುವಾರ ಮಧ್ಯಾಹ್ನ ಊಟಕ್ಕೆ ಬರದಿದ್ದಾಗ ಅವರ ಪತ್ನಿಯರು ಹುಡುಕಾಡಿದರು ಹಾಗೂ ಗೊಬ್ಬರ ಗುಂಡಿಯಲ್ಲಿ ಶವಗಳನ್ನು ಕಂಡರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬಂದು ಮೃತದೇಹಗಳನ್ನು ಮೇಲೆತ್ತಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News