ವಿಶ್ವಪ್ರಸಿದ್ಧ ‘ಒಂಟಿ ಹೋರಾಟಗಾರನ’ ಚಿತ್ರ ಕ್ಲಿಕ್ಕಿಸಿದ್ದ ವ್ಯಕ್ತಿ ನಿಧನ

Update: 2019-09-14 15:41 GMT

ಜಕಾರ್ತ (ಇಂಡೋನೇಶ್ಯ), ಸೆ. 14: 1989ರಲ್ಲಿ ತಿಯನಾನ್ಮೆನ್ ಚೌಕದಲ್ಲಿ ಚೀನಾ ಸೈನಿಕರು ನಡೆಸಿದ ದಮನ ಕಾರ್ಯಾಚರಣೆಯ ‘ಸ್ಮರಣಾರ್ಹ ಚಿತ್ರ’ವೊಂದನ್ನು ತೆಗೆದ ಛಾಯಾಚಿತ್ರಕಾರ ಚಾರ್ಲಿ ಕೋಲ್ ಇಂಡೋನೇಶ್ಯದಲ್ಲಿ ನಿಧನರಾಗಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಸೇನಾ ಟ್ಯಾಂಕ್ (ಫಿರಂಗಿ)ಗಳ ಸಾಲೊಂದು ಬರುತ್ತಿರುವಾಗ ವ್ಯಕ್ತಿಯೊಬ್ಬ ಅವುಗಳ ದಾರಿಯಲ್ಲಿ ಧಿಕ್ಕರಿಸಿ ನಿಂತ ಅಮೋಘ ಚಿತ್ರವನ್ನು ಅಮೆರಿಕದ ಟೆಕ್ಸಾಸ್ ನಿವಾಸಿಯಾಗಿರುವ ಕೋಲ್ ತೆಗೆದಿದ್ದರು.

64 ವರ್ಷದ ಛಾಯಾಚಿತ್ರಕಾರ ಇಂಡೋನೇಶ್ಯದ ಬಾಲಿಯಲ್ಲಿ ನಿಧನರಾಗಿದ್ದಾರೆ. ಅವರು ಹಲವು ಸಮಯದಿಂದ ಬಾಲಿಯಲ್ಲಿ ವಾಸವಾಗಿದ್ದರು.

ಚೀನಾ ರಾಜಧಾನಿ ಬೀಜಿಂಗ್‌ನ ಹೃದಯ ಭಾಗದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಧರಣಿ ನಡೆಸುತ್ತಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಸೇನಾ ಟ್ಯಾಂಕ್‌ಗಳು ಕೊಂದ ಮಾರನೇ ದಿನ, ಎರಡೂ ಕೈಗಳಲ್ಲಿ ಚೀಲಗಳನ್ನು ಹಿಡಿದುಕೊಂಡಿದ್ದ ಬಿಳಿ ಅಂಗಿ ಧರಿಸಿದ್ದ ವ್ಯಕ್ತಿಯೋರ್ವರು ಟ್ಯಾಂಕ್‌ಗಳ ದಾರಿಯಲ್ಲಿ ಅವುಗಳನ್ನು ಎದುರಿಸಿ ಒಬ್ಬರೇ ನಿಂತಿದ್ದರು.

ಕೋಲ್‌ರ ಚಿತ್ರವು 1990ರ ‘ವಿಶ್ವ ಪತ್ರಿಕಾ ಚಿತ್ರ’ ಪ್ರಶಸ್ತಿ ಪಡೆಯಿತು.

 ಚಿತ್ರದಲ್ಲಿದ್ದ ವ್ಯಕ್ತಿಯು ಬಳಿಕ ಎದುರಿನಲ್ಲಿದ್ದ ಟ್ಯಾಂಕ್ ಮೇಲೆ ಹತ್ತಿ ಅದರ ಸಿಬ್ಬಂದಿ ಜೊತೆ ಮಾತಿನ ಚಕಮಕಿಯನ್ನೂ ನಡೆಸಿದರು. ಅದೇ ಸಂದರ್ಭದಲ್ಲಿ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು.

‘ಟ್ಯಾಂಕ್ ಮನುಷ್ಯ’ ನಿಗೂಢ ನಾಪತ್ತೆ!

ಆದರೆ, ಬಳಿಕ ಆ ವ್ಯಕ್ತಿಯು ನಿಗೂಢ ರೀತಿಯಲ್ಲಿ ನಾಪತ್ತೆಯಾದರು. ಅವರನ್ನು ಚೀನಾದ ಭದ್ರತಾ ಪಡೆಗಳು ಅಪಹರಿಸಿರಬೇಕೆಂದು ಶಂಕಿಸಲಾಗಿತ್ತು.

ಆ ‘ಟ್ಯಾಂಕ್ ಮನುಷ್ಯ’ನ ಒಂಟಿ ಹೋರಾಟದ ಚಿತ್ರವನ್ನು ಆ ದಿನ ಹಲವು ಛಾಯಾಗ್ರಾಹಕರು ತೆಗೆದಿದ್ದರು. ಅಸೋಸಿಯೇಟಡ್ ಪ್ರೆಸ್ ಸುದ್ದಿ ಸಂಸ್ಥೆಯ ಜೆಫ್ ವೈಡನರ್ ಕೂಡ ಬೀಜಿಂಗ್‌ನ ಹೊಟೇಲೊಂದರ ಬಾಲ್ಕನಿಯಿಂದ ಆ ಚಿತ್ರವನ್ನು ತೆಗೆದಿದ್ದರು. ಆ ಚಿತ್ರ ಬಳಿಕ ‘ಪುಲಿಟ್ಝರ್ ಪ್ರಶಸ್ತಿ’ಗೆ ನಾಮನಿರ್ದೇಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News