ಗಡಿಯಲ್ಲಿ ಪಾಕ್‌ನಿಂದ ಶೆಲ್ ದಾಳಿ: ಶಾಲೆಯೊಳಗೆ ಬಾಕಿಯಾದ ಮಕ್ಕಳು

Update: 2019-09-14 15:36 GMT

ಶ್ರೀನಗರ,ಸೆ.14: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನಿ ಸೇನೆ ಶನಿವಾರ ತೀವ್ರ ಗುಂಡಿನ ದಾಳಿ ಮತ್ತು ಮೋರ್ಟರ್ ಶೆಲ್ಲಿಂಗ್ ನಡೆಸಿದ ಪರಿಣಾಮ ಹಲವು ಕಡೆಗಳಲ್ಲಿ ಮಕ್ಕಳು ಶಾಲೆಯೊಳಗೆಯೇ ಬಾಕಿಯಾದ ಘಟನೆ ನಡೆದಿದ್ದು, ಸದ್ಯ ಭಾರತೀಯ ಸೇನೆ ಈ ಮಕ್ಕಳ ರಕ್ಷಣಾ ಕಾರ್ಯದಲ್ಲಿ ತೊಡಗಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಶನಿವಾರ ಬೆಳಗ್ಗೆ 9.45ರ ಹೊತ್ತಿಗೆ ಆರಂಭವಾದ ಶೆಲ್ಲಿಂಗ್ ದಾಳಿಯಿಂದ ಮಂಕೊಟ್ ಸೆಕ್ಟರ್‌ನ ಬಲ್ನೊಯಿಯಿಂದ ತರ್ಕುಂಡಿವರೆಗಿನ 50 ಕಿ.ಮೀ ವ್ಯಾಪ್ತಿಯಲ್ಲಿರುವ 50ರಿಂದ 60 ಹಳ್ಳಿಗಳಲ್ಲಿ ಹಾನಿ ಸಂಭವಿಸಿದೆ. ಪಾಕಿಸ್ತಾನಿ ಸೇನೆ ನಿಯಂತ್ರಣ ರೇಖೆಯ ಬಳಿ ನೆಲೆಸಿರುವ ನಾಗರಿಕರನ್ನೇ ಗುರಿಯಾಗಿಸಿ ಈ ದಾಳಿ ನಡೆಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪತ್ರಿಕೆಯ ವರದಿಯನ್ನು ದೃಢಪಡಿಸಿರುವ ಪೂಂಚ್‌ನ ಸಹಾಯಕ ಕಮಿಷನರ್ ರಾಹುಲ್ ಯಾದವ್, ಬಾಲಕೋಟ್ ಪ್ರದೇಶದಲ್ಲಿ ಐದರಿಂದ ಆರು ಶಾಲೆಗಳು ಶೆಲ್ ದಾಳಿಯಿಂದ ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.

ಸದ್ಯ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಮತ್ತು ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸ್ಥಳೀಯರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News