ಪಾಕ್‌ಗೆ ಮಾನವಹಕ್ಕು ಕುರಿತು ಮಾತನಾಡುವ ಹಕ್ಕಿಲ್ಲ: ರಾಜನಾಥ್ ಸಿಂಗ್

Update: 2019-09-15 14:42 GMT

ಹೊಸದಿಲ್ಲಿ, ಸೆ.15: ಪಾಕಿಸ್ತಾನದಲ್ಲಿರುವ ಎಲ್ಲಾ ಅಲ್ಪಸಂಖ್ಯಾತ ಸಮುದಾಯದವರು ತಮ್ಮ ಸುರಕ್ಷತೆಯ ಬಗ್ಗೆ ಆತಂಕಿತರಾಗಿದ್ದಾರೆ. ಅಲ್ಲಿ ನೆಲೆಸಿರುವ ಸಿಂಧಿ, ಸಿಖ್ ಹಾಗೂ ಇತರ ಸಮುದಾಯದವರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಇಡೀ ಜಗತ್ತಿಗೇ ತಿಳಿದಿರುವ ವಿಷಯ. ಹೀಗಿರುವಾಗ ಪಾಕಿಸ್ತಾನಕ್ಕೆ ಮಾನವ ಹಕ್ಕು ಕುರಿತು ಮಾತನಾಡಲು ಯಾವ ನೈತಿಕ ಹಕ್ಕಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶ್ನಿಸಿದ್ದಾರೆ.

 ದೇಶ ವಿಭಜನೆಯ ಬಳಿಕ ಅಲ್ಲಿಗೆ ಹೋಗಿ ನೆಲೆಸಿದವರನ್ನು ಈಗಲೂ ಮುಜಾಹಿರ್‌ಗಳೆಂದು ಕರೆಯಲಾಗುತ್ತದೆ. ಅಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ರಕ್ಷಣೆಯಿಲ್ಲ. ನಿರಂತರ ಕಿರುಕುಳ ನೀಡಿ ಹಿಂದು ಹಾಗೂ ಸಿಖ್ ಮುಖಂಡರನ್ನು ಹತ್ಯೆ ಮಾಡಲಾಗುತ್ತದೆ ಎಂದು ಪಾಕಿಸ್ತಾನದಿಂದ ಭಾರತಕ್ಕೆ ಆಶ್ರಯ ಕೋರಿ ಬಂದಿರುವ ಆ ದೇಶದ ಮಾಜಿ ಶಾಸಕ ಬಲದೇವ್ ಕುಮಾರ್ ಹೇಳಿದ್ದಾರೆ. ಇದಕ್ಕಿಂತ ಬೇರೆ ಪುರಾವೆಯ ಅಗತ್ಯವಿದೆಯೇ ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಎಲ್ಲಾ ಜನರಲ್ಲೂ ಸುರಕ್ಷತೆಯ ಭಾವನೆಯಿದ್ದು ಇಲ್ಲಿ ಎಲ್ಲರನ್ನೂ ಸಮಾನವಾಗಿ ಗೌರವಿಸಲಾಗುತ್ತಿದೆ. ಭಾರತದಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ಸಮಾವೇಶದಲ್ಲಿ ಧ್ವನಿ ಎತ್ತುವ ಪಾಕಿಸ್ತಾನ ಮೊದಲು ತಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ಇನ್ನಾದರೂ ನಿಲ್ಲಿಸಿದರೆ ಆ ದೇಶಕ್ಕೇ ಒಳಿತು ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News