×
Ad

ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರಿ: ಪಾಕ್‌ಗೆ ಭಾರತದ ಸೂಚನೆ

Update: 2019-09-15 20:23 IST

ಹೊಸದಿಲ್ಲಿ, ಸೆ.15: ಈ ವರ್ಷ ಪಾಕಿಸ್ತಾನ 2,050ಕ್ಕೂ ಹೆಚ್ಚು ಬಾರಿ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘಿಸಿದ್ದು ಇದರಿಂದ 21 ಮಂದಿ ಮೃತಪಟ್ಟಿದ್ದಾರೆ. 2003ರ ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರುವಂತೆ ಪಾಕ್‌ಗೆ ನಿರಂತರ ಸೂಚನೆ ನೀಡಿದ್ದರೂ ನಾಗರಿಕರನ್ನು ಗುರಿಯಾಗಿಸಿಕೊಂಡು ಆ ದೇಶ ಗಡಿಯಲ್ಲಿ ಗುಂಡಿನ ದಾಳಿ ಮುಂದುವರಿಸಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕಿಸ್ತಾನ ಮತ್ತೆ ಕಾಶ್ಮೀರ ವಿಷಯವನ್ನು ಎತ್ತಿದ್ದು ಭಾರತ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಇದನ್ನು ತೀವ್ರವಾಗಿ ವಿರೋಧಿಸಿದ ಭಾರತ, ಪಾಕಿಸ್ತಾನ ಗಡಿ ನಿಯಂತ್ರಣಾ ರೇಖೆಯ ಬಳಿ ಕದನ ವಿರಾಮ ಉಲ್ಲಂಘಿಸಿ ನಿರಂತರ ಗುಂಡಿನ ದಾಳಿ ನಡೆಸುತ್ತಿದೆ. ಈ ಅಪ್ರಚೋದಿತ ದಾಳಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದಿದೆ ಎಂದು ತಿಳಿಸಿದೆ.

ಪಾಕ್ ಹೇಳಿಕೆಗೆ ವಿಶ್ವಸಂಸ್ಥೆ ವೇದಿಕೆಯಲ್ಲಿ ಸೂಕ್ತ ಇದಿರೇಟು ನೀಡಿರುವ ಭಾರತ, ಪಾಕಿಸ್ತಾನದ ಅಪ್ರಚೋದಿತ ದಾಳಿಯ ಮಧ್ಯೆಯೂ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತದ ಪಡೆಗಳು ಗರಿಷ್ಠ ಸಂಯಮ ಮತ್ತು ತಾಳ್ಮೆ ವಹಿಸಿವೆ. ಗಡಿಯಾಚೆಗಿಂದ ನುಸುಳಿ ಬರುವ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಿವೆ ಎಂದು ಹೇಳಿದೆ.

ಈ ವರ್ಷ 2050ಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘಿಸಲಾಗಿದೆ. ಜೊತೆಗೆ, ಗಡಿಯಾಚೆಗಿನ ಭಯೋತ್ಪಾದನೆಗೂ ಅವರಿಂದ ಪ್ರೋತ್ಸಾಹ ಮತ್ತು ಸಹಕಾರ ದೊರೆಯುತ್ತಿದೆ. 2003ರ ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿ ಅಂತರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣಾ ರೇಖೆಯ ಬಳಿ ಶಾಂತಿ ಮತ್ತು ನೆಮ್ಮದಿಯ ಪರಿಸ್ಥಿತಿ ನೆಲೆಸಲು ಪೂರಕ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ಸರಕಾರದ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News