ಇತರ ಮಾತೃಭಾಷೆಗಳ ವಿರುದ್ಧ ರಣಕೇಕೆ: ಶಾ ಹಿಂದಿ ಹೇಳಿಕೆಗೆ ಪಿಣರಾಯಿ ಪ್ರತಿಕ್ರಿಯೆ

Update: 2019-09-15 15:48 GMT

ತಿರುವನಂತಪುರ,ಸೆ.15: ಗೃಹಸಚಿವ ಅಮಿತ್ ಶಾ ಅವರ ‘ಒಂದು ದೇಶ ಒಂದು ಭಾಷೆ ’ಪ್ರತಿಪಾದನೆಯನ್ನು ಕಟುವಾಗಿ ಟೀಕಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು,ಇದೊಂದು ಅಸಂಬದ್ಧ ಪರಿಕಲ್ಪನೆ ಎಂದು ಬಣ್ಣಿಸಿದ್ದಾರೆ.

ಸಾಮಾನ್ಯ ಭಾಷೆಯಾಗಿ ಹಿಂದಿ ಹೇರಿಕೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳಿಗೆ ದೇಶವು ಈಗಾಗಲೇ ಸಾಕ್ಷಿಯಾಗಿದೆ ಮತ್ತು ಈ ಕ್ರಮವು ಸಂಘ ಪರಿವಾರವು ಭಾಷೆಯ ಹೆಸರಿನಲ್ಲಿ ಹೊಸದೊಂದು ರಣರಂಗವನ್ನು ಆರಂಭಿಸುತ್ತಿದೆ ಎನ್ನುವುದಕ್ಕೆ ಸಂಕೇತವಾಗಿದೆ. ಹಿಂದಿ ಭಾಷೆಯು ಮಾತ್ರ ದೇಶವನ್ನು ಒಗ್ಗೂಡಿಸಬಲ್ಲದು ಎಂಬ ಕಲ್ಪನೆಯೇ ತಪ್ಪು. ದಕ್ಷಿಣ ಭಾರತ ಮತ್ತು ಈಶಾನ್ಯ ರಾಜ್ಯಗಳ ಜನರು ಹಿಂದಿಯನ್ನು ಮಾತನಾಡುವುದಿಲ್ಲ ಎಂದು ಪಿಣರಾಯಿ ರವಿವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಯಾವುದೇ ಭಾರತೀಯ ತನಗೆ ಹಿಂದಿ ಮಾತನಾಡಲು ಅಥವಾ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬಷ್ಟಕ್ಕೇ ತಾನು ಇಲ್ಲ್ಲಿಗೆ ಸೇರಿದವನಲ್ಲ ಎಂದು ಭಾವಿಸುವಂತೆ ಮಾಡಕೂಡದು ಎಂದೂ ಅವರು ತಿಳಿಸಿದ್ದಾರೆ.

ಶಾ ಅವರ ಕ್ರಮವನ್ನು ಗುರಿಯಾಗಿಸಿಕೊಂಡು ಟ್ವಿಟರ್ ಬಾಣವನ್ನೂ ಬಿಟ್ಟಿರುವ ಪಿಣರಾಯಿ,ಹಿಂದಿ ಹೆಚ್ಚಿನ ಭಾರತೀಯರ ಮಾತೃಭಾಷೆಯಲ್ಲ. ಅವರ ಮೇಲೆ ಹಿಂದಿಯನ್ನು ಹೇರುವುದು ಅವರನ್ನು ಗುಲಾಮರನ್ನಾಗಿಸುವುದಕ್ಕೆ ಸಮವಾಗಿದೆ. ಹಿಂದಿ ಈ ದೇಶದ ಸಾಮಾನ್ಯ ಭಾಷೆಯಾಗಬೇಕೆಂಬ ಶಾ ಅವರ ಹೇಳಿಕೆಯು ಹಿಂದಿಯೇತರ ಭಾಷಿಕ ಜನರ ಮಾತ್ರಭಾಷೆಗಳ ವಿರುದ್ಧ ರಣಕೇಕೆಯಾಗಿದೆ ಎಂದು ಹೇಳಿದ್ದಾರೆ.

ಇವೆಲ್ಲ ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಳು ಎನ್ನುವುದು ಜನರಿಗೆ ಶೀಘ್ರವೇ ಅರ್ಥವಾಗಲಿದೆ ಎಂದಿರುವ ಅವರು,ಸಂಘ ಪರಿವಾರವು ತನ್ನ ವಿಭಜಕ ನೀತಿಗಳನ್ನು ತೊರೆಯಬೇಕು. ಇದು ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಸಂಚು ಎನ್ನುವುದು ಜನರಿಗೆ ಅರಿವಾಗುತ್ತದೆ ಎನ್ನುವುದನ್ನು ಅದು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News