ಅತ್ಯಾಚಾರ,ಪೊಕ್ಸೊ ಪ್ರಕರಣಗಳ ವಿಚಾರಣೆಗಾಗಿ, 1023 ವಿಶೇಷ ತ್ವರಿತ ನ್ಯಾಯಾಲಯಗಳ ಸ್ಥಾಪನೆ

Update: 2019-09-15 15:54 GMT

ಹೊಸದಿಲ್ಲಿ,ಸೆ.15: ದೇಶಾದ್ಯಂತ ಬಾಕಿಯಿರುವ 1.66 ಲಕ್ಷಕ್ಕೂ ಅಧಿಕ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳ ಕ್ಷಿಪ್ರ ವಿಚಾರಣೆಗಾಗಿ ಒಟ್ಟು 1,023 ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರಕಾರವು ಉದ್ದೇಶಿಸಿದೆ.

ಪ್ರತಿಯೊಂದೂ ತ್ವರಿತ ನ್ಯಾಯಾಲಯವು ವರ್ಷಕ್ಕೆ ಕನಿಷ್ಠ 165 ಇಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಕಾನೂನು ಸಚಿವಾಲಯದ ಅಧೀನದ ನ್ಯಾಯ ಇಲಾಖೆಯು ತನ್ನ ಪ್ರಸ್ತಾವದಲ್ಲಿ ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ಒಟ್ಟು 1,023 ತ್ವರಿತ ನ್ಯಾಯಾಲಯಗಳ ಪೈಕಿ 389 ನ್ಯಾಯಾಲಯಗಳು ಪೊಕ್ಸೊದಡಿ ದಾಖಲಾಗಿರುವ ಪ್ರಕರಣಗಳನ್ನು ಮಾತ್ರ ನಿರ್ವಹಿಸಲಿವೆ. ಉಳಿದ 634 ನ್ಯಾಯಾಲಯಗಳು ಬಾಕಿಯುಳಿದಿರುವಿಕೆ ಮತ್ತು ಅಗತ್ಯವನ್ನು ಅವಲಂಬಿಸಿ ಅತ್ಯಾಚಾರ ಪ್ರಕರಣಗಳನ್ನು ಅಥವಾ ಅತ್ಯಾಚಾರ ಮತ್ತು ಪೊಕ್ಸೊ ಪ್ರಕರಣಗಳೆರಡನ್ನೂ ವಿಚಾರಣೆ ನಡೆಸಲಿವೆ.

ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 1,66,882 ಅತ್ಯಾಚಾರ ಮತ್ತು ಪೊಕ್ಸೊ ಪ್ರಕರಣಗಳು ಬಾಕಿಯಿವೆ. 389 ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಪೊಕ್ಸೊ ಪ್ರಕರಣಗಳು ಬಾಕಿಯಿವೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶದ ಮೇರೆಗೆ ಇಂತಹ ಪ್ರತಿ ಜಿಲ್ಲೆಯೂ ವಿಶೇಷ ಪೊಕ್ಸೊ ನ್ಯಾಯಾಲಯವನ್ನು ಹೊಂದಿರಲಿದೆ ಮತ್ತು ಈ ನ್ಯಾಯಾಲಯಗಳು ಪೊಕ್ಸೊ ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸುತ್ತವೆ.

762.25 ಕೋ.ರೂ.ಗಳ ಒಟ್ಟು ವೆಚ್ಚದಲ್ಲಿ ಈ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಪ್ರಕ್ರಿಯೆ ಆ.2ರಿಂದ ಆರಂಭಗೊಳ್ಳುವ ಸಾಧ್ಯತೆಯಿದೆ ಎಂದು ಕಾನೂನು ಸಚಿವಾಲಯವು ಈ ಹಿಂದೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News