ಸೌರಭ್ ವರ್ಮಾ ಮುಡಿಗೆ ವಿಯೆಟ್ನಾಂ ಓಪನ್ ಕಿರೀಟ

Update: 2019-09-15 18:17 GMT

  ಹೊ ಚಿ ಮಿನ್ ಸಿಟಿ, ಸೆ.15: ಭಾರತದ ಬ್ಯಾಡ್ಮಿಂಟನ್ ತಾರೆ ಸೌರಭ್ ವರ್ಮಾ ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪುರುಷ ಸಿಂಗಲ್ಸ್ ನ ಫೈನಲ್‌ನಲ್ಲಿ ಇಂದು ಜಯ ಗಳಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪುರುಷ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ಸನ್ ಫೀ ಕ್ಸಿಂಗ್ ವಿರುದ್ಧ 21-12, 17-21, 21-14ರ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿಯನ್ನು ಬಾಚಿಕೊಂಡರು. 75,000 ಅಮೆರಿಕನ್ ಡಾಲರ್ ಮೊತ್ತದ ವಿಯೆಟ್ನಾಂ ಓಪನ್ ಬಿಡಬ್ಲ್ಯುಎಫ್ ಟೂರ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಒಂದು ಗಂಟೆ 12 ನಿಮಿಷಗಳ ಕಾಲ ನಡೆಯಿತು, ಈ ಹೋರಾಟದಲ್ಲಿ ಸೌರಭ್ ಗೆಲುವಿನ ನಗೆ ಬೀರಿದರು. ಎರಡನೇ ಶ್ರೇಯಾಂಕದ ಸೌರಭ್ ಈ ವರ್ಷದ ಆರಂಭದಲ್ಲಿ ಹೈದರಾಬಾದ್ ಓಪನ್ ಮತ್ತು ಸ್ಲೋವೆನಿಯನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು.

26ರ ಹರೆಯದ ಮಧ್ಯಪ್ರದೇಶ ಮೂಲದ ಸೌರಭ್ ಕಳೆದ ವರ್ಷ ಡಚ್ ಓಫನ್ ಹಾಗೂ ಕೊರಿಯಾ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಜಪಾನ್‌ನ ಕೊಡಾಯಿ ನಾರಾವುಕಾ , ಯು ಐಗಾರಾಶಿ ಮತ್ತು ಮಿನಾರು ಕೊಗಾ ವಿರುದ್ಧ ಜಯ ಗಳಿಸಿದ್ದರು. ವಿಯೆಟ್ನಾಂ ಓಪನ್ ಗೆದ್ದಿರುವುದಕ್ಕೆ ಸೌರಭ್ ವರ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಫೈನಲ್ ಪಂದ್ಯ ಕಠಿಣವಾಗಿತ್ತು. ಆದರೆ ನನಗೆ ಚೆನ್ನಾಗಿ ಆಡಲು ಸಾಧ್ಯವಾಗಿರುವುದಕ್ಕೆ ಸಂತಸವಾಗುತ್ತದೆ. ಈ ಗೆಲುವು ಇನ್ನು ಹೆಚ್ಚಿನ ಉತ್ತೇಜನವನ್ನು ನೀಡಲಿದೆ ಎಂದು ಹೇಳಿದ್ದಾರೆ.

ಕಳೆದೊಂದು ವಾರದಲ್ಲಿ ಜಪಾನ್ ಸೇರಿದಂತೆ ಚೀನಾದ ಪ್ರಬಲ ಪ್ರತಿಸ್ಪರ್ಧಿಗಳ ವಿರುದ್ಧ ಸೌರಭ್ ಪ್ರಭಾವಿ ಪ್ರದರ್ಶನ ನೀಡುವ ಮೂಲಕ ಗೆಲುವು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News