7ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿದ ಅಫ್ಘಾನ್‌ನ ನಬಿ-ಝದ್ರನ್

Update: 2019-09-15 18:21 GMT

ಢಾಕಾ, ಸೆ.15: ಝಿಂಬಾಬ್ವೆ ವಿರುದ್ದ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಅಫ್ಘಾನಿಸ್ತಾನ ಬ್ಯಾಟ್ಸ್ ಮನ್‌ಗಳಾದ ಮುಹಮ್ಮದ್ ನಬಿ ಹಾಗೂ ನಝೀಬುಲ್ಲ ಝದ್ರನ್ ಏಳು ಎಸೆತಗಳಲ್ಲಿ ಸತತ ಏಳು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

  ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಫಘಾನಿಸ್ತಾನದ ಮುಹಮ್ಮದ್ ನಬಿ ಹಾಗೂ ನಜೀಬುಲ್ಲಾ ಝದ್ರನ್ ಈ ಸಾಧನೆಯನ್ನು ಮಾಡಿ ದ್ದಾರೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ 28 ರನ್‌ಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿದೆ.

    2007ನೇ ಇಸವಿಯಲ್ಲಿ ನಡೆದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ನ ಎಲ್ಲ ಆರು ಎಸೆತಗಳನ್ನು ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ಸಿಕ್ಸರ್‌ಗಟ್ಟಿದ್ದರು. ಈ ದಾಖಲೆಯನ್ನು ಮುರಿಯಲು ಈ ವರೆಗೂ ಯಾರಿಗೂ ಸಾಧ್ಯವಾಗಿಲ್ಲ. ಇದೀಗ ಅಫ್ಘಾನಿಸ್ತಾನದ ಇಬ್ಬರು ಬ್ಯಾಟ್ಸ್‌ಮನ್‌ಗಳು ಏಳು ಎಸೆತಗಳಲ್ಲಿ ಏಳು ಸಿಕ್ಸರ್‌ಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. ಅಫ್ಘಾನಿಸ್ತಾನದ ಇನಿಂಗ್ಸ್‌ನ 17 ಹಾಗೂ 18ನೇ ಓವರ್‌ನಲ್ಲಿ ಝಿಂಬಾಬ್ವೆ ಬೌಲರ್‌ಗಳನ್ನು ನಬಿ ಹಾಗೂ ಝದ್ರನ್ ಚೆನ್ನಾಗಿ ದಂಡಿಸಿದ್ದಾರೆ. 16 ಓವರ್‌ಗಳಲ್ಲಿ ಅಫ್ಘಾನಿಸ್ತಾನ ನಾಲ್ಕು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತ್ತು. 17ನೇ ಓವರ್‌ನ ಕೊನೆಯ ನಾಲ್ಕು ಎಸೆತಗಳನ್ನು ನಬಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು. ಬಳಿಕ ನಬಿಗೆ ಕೈಜೋಡಿಸಿದ ಝದ್ರನ್ 18ನೇ ಓವರ್‌ನ ಮೂರು ಎಸೆತಗಳನ್ನು ಸಿಕ್ಸರ್‌ಗಟ್ಟಿದರು. ಇವರ ಸಾಹಸದ ನೆರವಿನಲ್ಲಿ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತ್ತು. 30 ಎಸೆತಗಳನ್ನು ಎದುರಿಸಿದ ನಝೀಬುಲ್ಲಾ 5ಬೌಂಡರಿ ಹಾಗೂ ಆರು ಸಿಕ್ಸರ್‌ಗಳಿರುವ 69 ರನ್ ಗಳಿಸಿ ಅಜೇಯರಾಗುಳಿದರು. ನಬಿ 18 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳಿರುವ 38 ರನ್ ಗಳಿಸಿದರು. ಆರಂಭಕಾರ ಹಾಗೂ ವಿಕೆಟ್ ಕೀಪರ್ ರಹ್ಮತುಲ್ಲಾ ಗುರ್ಬಝ್ 43 ರನ್ ಸೇರಿಸಿದರು.

  ಗೆಲುವಿಗೆ 198 ರನ್‌ಗಳ ಸವಾಲನ್ನು ಪಡೆದ ಝಿಂಬಾಬ್ವೆ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 169 ರನ್ ಗಳಿಸಿತು. ರೆಗಿಸ್ ಚಕಬ್ವ (ಔಟಾಗದೆ 42) ಗರಿಷ್ಠ ವೈಯಕ್ತಿಕ ಕೊಡುಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News