ಸ್ಥಿರತೆ ಕಾಯ್ದುಕೊಂಡು ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವ ವಿಶ್ವಾಸವಿದೆ: ಚಿರಾಗ್ ಶೆಟ್ಟಿ

Update: 2019-09-15 18:24 GMT

 ಹೊಸದಿಲ್ಲಿ, ಸೆ.15: ಗಾಯದಿಂದ ಚೇತರಿಸಿಕೊಂಡು ಮತ್ತೆ ಆಟದ ಅಂಗಣಕ್ಕಿಳಿದಿರುವ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿಯಾದ ಚಿರಾಗ್ ಶೆಟ್ಟಿ- ಸಾತ್ವಿಕ್‌ಸಾರಾಜ್ ರಂಕಿರೆಡ್ಡಿ ಆಟದಲ್ಲಿ ನಿರಂತರ ಸ್ಥಿರತೆ ಕಾಯ್ದುಕೊಂಡು 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿದ್ದಾರೆ. ಅಗ್ರ 5 ಶ್ರೇಯಾಂಕದಲ್ಲಿ ಸ್ಥಾನ ಪಡೆದು 2020ರ ಟೊಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ ತಮ್ಮ ಮುಂದಿದೆ. ಈಗ ನಾವು ಸಂಪೂರ್ಣ ಫಿಟ್ ಆಗಿದ್ದು ಶೇ.100ರಷ್ಟು ಸಾಮರ್ಥ್ಯವನ್ನು ಪ್ರದರ್ಶಿಸಿ ಚೀನಾ ಮತ್ತು ಕೊರಿಯಾದಲ್ಲಿ ನಡೆಯಲಿರುವ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಬೇಕಿದೆ. ಇದರಿಂದ ನಮ್ಮ ಶ್ರೇಯಾಂಕ ಉತ್ತಮಗೊಳ್ಳಲಿದೆ ಎಂದು ಚಿರಾಗ್ ಹೇಳಿದ್ದಾರೆ. ಕಳೆದ ತಿಂಗಳು ಥಾಯ್ಲಾಂಡ್‌ನಲ್ಲಿ ನಡೆದಿದ್ದ ಬಿಡಬ್ಲೂಎಫ್ ಸೂಪರ್ 500 ಟೂರ್ನಿಯಲ್ಲಿ ಭಾರತದ ಈ ಜೋಡಿ ಪ್ರಶಸ್ತಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿರುವ ಭಾರತದ ಮೊತ್ತಮೊದಲ ಜೋಡಿ ಎಂಬ ಚರಿತ್ರೆ ನಿರ್ಮಿಸಿದೆ. ಈ ಟೂರ್ನಿಯ ಗೆಲುವು ಭಾರತದ ಜೋಡಿಯನ್ನು ವಿಶ್ವದ ಅಗ್ರ 10 ಡಬಲ್ಸ್ ಆಟಗಾರರ ಪಟ್ಟಿಗೆ ಸೇರಿಸಿತ್ತು. ಆದರೆ ಈ ಟೂರ್ನಿಯ ಸಂದರ್ಭದಲ್ಲಿ ಇಬ್ಬರು ಆಟಗಾರರೂ ಗಾಯಾಳುಗಳಾದ ಕಾರಣ ಬಾಸೆಲ್‌ನಲ್ಲಿ ನಡೆದ ಪ್ರತಿಷ್ಠಿತ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದರು. ಇದರಿಂದ ಶ್ರೇಯಾಂಕವೂ 15ಕ್ಕೆ ಕುಸಿದಿತ್ತು. ಆಟದಲ್ಲಿ ನಿರಂತರ ಸ್ಥಿರತೆ ಕಾಯ್ದುಕೊಂಡರೆ ಮುಂದಿನ ವರ್ಷದ ಜನವರಿಯಿಂದ ಎಪ್ರಿಲ್‌ವರೆಗೆ ಅಗ್ರ 10ರ ಸ್ಥಾನದಲ್ಲಿ ಉಳಿಯಬಹುದು. ಬಳಿಕ ಒಂದೆರಡು ಟೂರ್ನಿಗಳಲ್ಲಿ ಸೆಮಿಫೈನಲ್ ತಲುಪಿದರೂ ಶ್ರೇಯಾಂಕ ಉತ್ತಮಗೊಂಡು ಅಗ್ರ 5ರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯ. ಆಗ ಸುಲಭವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬಹುದು. ಆದರೆ ಶ್ರೇಯಾಂಕವನ್ನು ಕಾಯ್ದುಕೊಳ್ಳುವುದು ಸುಲಭವಲ್ಲ ಎಂದು 22 ವರ್ಷದ ಚಿರಾಗ್ ಶೆಟ್ಟಿ ಹೇಳಿದ್ದಾರೆ. ಮಂಗಳವಾರ ಆರಂಭವಾಗುವ ಚೀನಾ ಓಪನ್ ಟೂರ್ನಿಯ ಪ್ರಥಮ ಸುತ್ತಿನಲ್ಲಿ ಸಾತ್ವಿಕ್- ಚಿರಾಗ್ ಜೋಡಿ ಕೆನಡಾದ ಜೇಸನ್ ಆ್ಯಂಥನಿ ಹೊ-ಶು ಮತ್ತು ನಿಯೆಲ್ ಯಕುರಾ ಜೋಡಿಯೆದುರು ಸೆಣಸಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News