'ಹೌಡಿ, ಮೋದಿ' ಕೂಟಕ್ಕೆ ಟ್ರಂಪ್: ಭಾರತ ಹರ್ಷ

Update: 2019-09-16 05:05 GMT
ಫೈಲ್ ಫೋಟೋ

ವಾಷಿಂಗ್ಟನ್, ಸೆ.16: ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಈ ತಿಂಗಳ 22ರಂದು ನಡೆಯುವ "ಹೌಡಿ, ಮೋದಿ" ಮೆಗಾ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದನ್ನು ಭಾರತ ಐತಿಹಾಸಿಕ ಮತ್ತು ಅಭೂತಪೂರ್ವ ಎಂದು ಭಾರತ ಬಣ್ಣಿಸಿದೆ.

"ಇದು ಉಭಯ ನಾಯಕರ ನಡುವಿನ ವೈಯಕ್ತಿಕ ಸಂಬಂಧ ಹಾಗೂ ಸ್ನೇಹವನ್ನು ಪ್ರತಿಬಿಂಬಿಸುತ್ತದೆ" ಎಂದು ಭಾರತೀಯ ರಾಯಭಾರಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ. ಇದು ಉಭಯ ನಾಯಕರ ನಡುವಿನ ನಿಕಟ ಸಂಬಂಧವನ್ನು ಬಿಂಬಿಸುವುದು ಮಾತ್ರವಲ್ಲದೇ, ಉಭಯ ಗಣ್ಯರ ನಡುವಿನ ಸ್ನೇಹ ಹಾಗೂ ವೈಯಕ್ತಿಕ ಸಂಬಂಧಸೂತ್ರವನ್ನೂ ಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದನ್ನು ರವಿವಾರ ಶ್ವೇತಭವನ ಖಚಿತಪಡಿಸಿದೆ. ಈ ವರ್ಷದಲ್ಲಿ ಇದು ಉಭಯ ನಾಯಕರ ನಡುವಿನ ಮೂರನೇ ಭೇಟಿಯಾಗಿದೆ. ಕಳೆದ ತಿಂಗಳ 26ರಂದು ಫ್ರಾನ್ಸ್‌ನಲ್ಲಿ ಜಿ7 ಶೃಂಗದ ವೇಳೆ ಟ್ರಂಪ್- ಮೋದಿ ಮಾತುಕತೆ ನಡೆಸಿದ್ದರು.

ಮೊಟ್ಟಮೊದಲ ಅಮೆರಿಕನ್ ಹಿಂದೂ ಸಂಸದೆ ತುಳಸಿ ಗರ್ಬಾಡ್, ಸಂಸದ ರಾಜಾ ಕೃಷ್ಣಮೂರ್ತಿ ಸೇರಿದಂತೆ 60 ಮಂದಿ ಪ್ರಮುಖ ಸಂಸದರು ಇದರಲ್ಲಿ ಭಾಗವಹಿಸಲಿದ್ದು, ಈಗಾಗಲೇ 50 ಸಾವಿರಕ್ಕೂ ಅಧಿಕ ಮಂದಿ ಇದರಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೂಸ್ಟನ್ ಟೆಕ್ಸಾನ್ಸ್ ಫುಟ್ಬಾಲ್ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಹೇಳಿದ್ದಾರೆ.

ವಿಶ್ವದ ಹಳೆಯ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳ ನಡುವಿನ ಪ್ರಬಲ ಸಂಬಂಧವನ್ನು ಪ್ರದರ್ಶಿಸುವ ಅದ್ಭುತ ಅವಕಾಶ ಇದಾಗಿದೆ. ವಿದ್ಯುತ್ ಹಾಗೂ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಕಾರ್ಯವಿಧಾನದ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

"ಶೇರ್ಡ್‌ ಡ್ರೀಮ್ಸ್, ಬ್ರೈಟ್ ಫ್ಯೂಚರ್ಸ್‌" ಎಂಬ ಘೋಷವಾಕ್ಯದಡಿ ಈ ಶೃಂಗಸಭೆ ನಡೆಯುತ್ತಿದೆ. ಕಳೆದ ಏಳು ದಶಕಗಳಲ್ಲಿ ಅಮೆರಿಕದ ಜನಜೀವನ ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಭಾರತೀಯ ಮೂಲದ ಅಮೆರಿಕನ್ನರ ಕೊಡುಗೆ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News