ಮನುಷ್ಯ ಎಚ್ಚೆತ್ತುಕೊಳ್ಳದ ಪರಿಣಾಮ ಪ್ರಾಕೃತಿಕ ದುರಂತ ಹೆಚ್ಚಳ: ಎಡಿಸಿ ಸದಾಶಿವ ಪ್ರಭು

Update: 2019-09-16 14:09 GMT

ಉಡುಪಿ, ಸೆ.16: ಪ್ರಕೃತಿಯಲ್ಲಿನ ಅಸಮತೋಲನದಿಂದಾಗಿ ಇಂದು ಅನೇಕ ದುರಂತಗಳನ್ನು ಎದುರಿಸುವಂತಾಗಿದೆ. ಪ್ರಕೃತಿ ಈ ಬಗ್ಗೆ ಎಚ್ಚರಿಕೆ ನೀಡಿದರೂ ಮನುಷ್ಯ ಎಚ್ಚೆತ್ತುಕೊಳ್ಳದ ಪರಿಣಾಮ ದುರಂತಗಳು ಹೆಚ್ಚಾಗುತ್ತಿವೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಹೇಳಿದ್ದಾರೆ.

ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ವತಿಯಿಂದ ಸೊಸೈಟಿಯ ಮುಖ್ಯ ಕಚೇರಿಯ ಆವರಣದಲ್ಲಿ ಆಯೋಜಿಸಲಾದ ಶತಮಾನ ಕಂಡ ಸಂಸ್ಥೆಯೊಂದಿಗೆ ಸಾಲುಮರದ ತಿಮ್ಮಕ್ಕ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ಕಳೆದ ವರ್ಷ ಕೊಡಗು ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರಕೃತಿ ಮುನಿಸಿ ಕೊಂಡಿರುವುದು ಕಂಡುಬಂದಿದೆ. ಪ್ರಕೃತಿ ಈ ಕುರಿತು ಮುನ್ಸೂಚನೆಗಳನ್ನು ನೀಡುತ್ತ ಬಂದರೂ ನಾವು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಮರಗಳ ನಾಶ ನಿರಂತರವಾಗಿ ಮುಂದುವರೆಯುತ್ತಿದೆ. ಈ ವಿಚಾರದಲ್ಲಿ ಸರಕಾರದೊಂದಿಗೆ ನಾಗರಿಕರು ಕೂಡ ಕೈಜೋಡಿಸಿದರೆ ಮಾತ್ರ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.

ಉಡುಪಿ ನಗರಸಭೆ ಪೌರಾಯುಕ್ತ ಆನಂದ್ ಸಿ. ಕಲ್ಲೋಳಿಕರ್ ಮಾತನಾಡಿ, ಕಳೆದ ಬೇಸಿಗೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನೀರಿಗೆ ಸಮಸ್ಯೆ ಉಲ್ಬಣಗೊಂಡು ಜನ ತತ್ತರಿಸಿ ಹೋಗಿದ್ದರು. ಈ ನಿಟ್ಟಿನಲ್ಲಿ 2019-20ನೆ ಸಾಲಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ನಗರಸಭೆಯ ಎಲ್ಲ 35 ವಾರ್ಡ್ ಗಳಲ್ಲಿ ಗಿಡ ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಿದರು. ಉಡುಪಿ ವೃತ್ತ ನಿರೀಕ್ಷಕ ಮಂಜು ನಾಥ್, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ, ಸಾಲುಮರದ ತಿಮ್ಮಕ್ಕ ಅವರ ದತ್ತುಪುತ್ರ ಉಮೇ್ ಬಿ.ಎನ್. ಮುಖ್ಯ ಅತಿಥಿಗಳಾಗಿದ್ದರು.

ಶತಮಾನೋತ್ಸವ ಸಮಿತಿಯ ಸಂಚಾಲಕ ಪುರುಷೋತ್ತಮ ಪಿ. ಶೆಟ್ಟಿ, ಸಂಘದ ಉಪಾಧ್ಯಕ್ಷ ಎಲ್.ಉಮಾನಾಥ್ ಉಪಸ್ಥಿತರಿದ್ದರು. ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News