ಹಳೆಯಂಗಡಿ ಗ್ರಾಮ ಪಂಚಾಯತ್ ಬರ್ಕಾಸ್ತು: ಸದಸ್ಯರ ಗದ್ದಲದೊಂದಿಗೆ ದ.ಕ.ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ

Update: 2019-09-16 14:20 GMT

ಮಂಗಳೂರು, ಸೆ.16: ಸದಸ್ಯರ ವಾಗ್ವಾದ, ಪರ- ವಿರೋಧದ ಚರ್ಚೆಯ ನಡುವೆಯೇ ದ.ಕ. ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಇಂದು ಹಳೆಯಂಗಡಿ ಗ್ರಾಮ ಪಂಚಾಯತನ್ನು ಬರ್ಕಾಸ್ತುಗೊಳಿಸು ನಿರ್ಣಯವನ್ನು ಕೈಗೊಳ್ಳಲಾಯಿತು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ದ.ಕ. ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ತೀವ್ರ ಗದ್ದಲದ ನಡುವೆ 21 ಮಂದಿ (ಓರ್ವ ತಾಲೂಕು ಪಂಚಾಯತ್ ಅಧ್ಯಕ್ಷರು ಸೇರಿ) ಪರ ಹಾಗೂ 16 ಮಂದಿ ಸದಸ್ಯರ ವಿರೋಧದೊಂದಿಗೆ ನಿರ್ಣಯವನ್ನು ಮಾಡಲಾಯಿತು.

ಹಳೆಯಂಗಡಿ ಗ್ರಾಮ ಪಂಚಾಯತನ್ನು ಬರ್ಕಾಸ್ತುಗೊಳಿಸುವ ಬಗ್ಗೆ ಕಳೆದ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯನ್ನು ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಪ್ರಸ್ತಾಪಿಸಿದರು. ಗ್ರಾಮ ಪಂಚಾಯತ್‌ನ ಅವಧಿಯಲ್ಲಿ ಕನಿಷ್ಠ 40 ಸಾಮಾನ್ಯ ಸಭೆಗಳಾಗಬೇಕು. ಆದರೆ 50ಕ್ಕೂ ಅಧಿಕ ಸೌಕರ್ಯ ಸಮಿತಿ ಆಗಿದೆ.ಈ ಸಮಿತಿಯಡಿ ಮನೆ ನಂಬ್ರ, ಕುಡಿಯುವ ನೀರಿನ ಸಂಪರ್ಕ, ಬೀದಿ ದೀಪಗಳ ಅಳವಡಿಕೆಯಲ್ಲಿ ಸಾಕಷ್ಟು ಅವ್ಯವಹಾರವಾಗಿ ಶಿಕ್ಷೆಯ ಹಂತಕ್ಕೆ ಬಂದಿದೆ. ಪಂಚಾಯತ್ ವ್ಯವಸ್ಥೆಯೇ ಸರಿ ಇಲ್ಲ. ಹಾಗಾಗಿ ಅದನ್ನು ಬರ್ಕಾಸ್ತುಗೊಳಿಸಬೇಕು ಎಂದು ಆಗ್ರಹಿಸಿದರು.

ಅಲ್ಲಿ ಪಂಚಾಯತ್ ವ್ಯವಸ್ಥೆಯೇ ಸರಿ ಇಲ್ಲ. ಕೆಲಸ ಕಾರ್ಯ ಆಗುತ್ತಿಲ್ಲ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯೇ ಇಲ್ಲವಾಗಿದ್ದು, ಆಡಳಿತಾಧಿಕಾರಿ ನೇಮಕವಾಗಬೇಕು ಎಂದು ಸದ್ಯ ಸುಚರಿತ ಶೆಟ್ಟಿ ಅಭಿಪ್ರಾಯಿಸಿದರು.

ಸದಸ್ಯೆ ಮಮತಾ ಗಟ್ಟಿ ಮಾತನಾಡಿ, ಈ ರೀತಿ ಬರ್ಕಾಸ್ತು ಮಾಡುವ ಕ್ರಮ ಸರಿ ಅಲ್ಲ. ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಸಮಯಾವಕಾಶ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸದಸ್ಯ ಎಂ.ಎಸ್. ಮುಹಮ್ಮದ್, ದನಿಗೂಡಿಸಿ ವಿಸರ್ಜನೆ ಆಗಬಾರದು. ಈಗಾಗಲೇ ಹೀರೇಬಂಡಾಡಿ ಗ್ರಾ.ಪಂ. ವಿಷಯದಲ್ಲೂ ಈ ರೀತಿ ಕ್ರಮ ಕೈಗೊಂಡು ಬಳಿಕ ಕೋರ್ಟ್ ಮೂಲಕ ಗ್ರಾಪಂ ಗೆಲುವು ಸಾಧಿಸಿದ ಇತಿಹಾಸ ಇದೆ. ಬಹುಮತ ಇದೆ ಎಂದು ವಿಸರ್ಜನೆ ಮಾಡಿದರೆ ಮುಂದೆ ಮುಖಭಂಗ ಆಗಲಿದೆ ಎಂದು ಹೇಳಿದರು.

ಈ ಸಂದರ್ಭ ಉಪಾಧ್ಯಕ್ಷೆ ಕಸ್ತೂರಿ ಪಂಜ ಪ್ರತಿಕ್ರಿಯಿಸಿ, ಜಿ.ಪಂ.ನಿಂದ ಹಿಡಿದು ಎಲ್ಲಾ ಮಟ್ಚದ ಅಧಿಕಾರಿಗಳು ಸಭೆ, ತನಿಖೆ ನಡೆಸಿ ಆಗಿದೆ. ಊರಿನವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಹಳೆಯಂಗಡಿ ಪಂಚಾಯತ್‌ನಷ್ಟು ತೆಗೆದು ಹಾಕಿದ ಪಂಚಾಯತ್ ಇನ್ನೊಂದಿಲ್ಲ. ಅದನ್ನು ಬರ್ಕಾಸ್ತು ವಾಡುವ ನಿರ್ಣಯವೇ ಸೂಕ್ತ ಎಂದರು.

ಈ ಸಂದರ್ಭ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ಆರಂಭವಾಯಿತು. ವಿಪಕ್ಷ ಸದಸ್ಯರು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರೆ, ಆಡಳಿತ ಪಕ್ಷವು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನಿಲುವನ್ನು ಹೊಂದಿದೆ ಎಂದು ವಿಪಕ್ಷ ಸದಸ್ಯರು ಆಕ್ಷೇಪಿಸಿದರು.

ಈ ಸಂದರ್ಭ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಬರ್ಕಾಸ್ತಿಗೆ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದಾಗ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಜಿಪಂ ಆಡಳಿತ ಸರ್ವಾಧಿಕಾರಿ ಧೋರಣೆಯನ್ನು ತಳೆಯುತ್ತಿದೆ ಎಂದು ಆರೋಪಿಸಿದರು.

ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆಯುತ್ತಿದ್ದಂತೆ, ನಿರ್ಣಯ ಕೈಗೊಳ್ಳದಿದ್ದರೆ ನಾವೆಲ್ಲಾ ಎದ್ದು ಹೋಗುವುದಾಗಿ ಸದಸ್ಯ ಕೊರಗಪ್ಪ ನಾಯ್ಕ ಹೇಳುತ್ತಿದ್ದಂತೆಯೇ ಆಡಳಿತ ಸದಸ್ಯರು ಸಭಾತ್ಯಾಗ ಮಾಡಿದರು. ಸದಸ್ಯೆ ಮಮತಾ ಗಟ್ಟಿ ಹಾಗೂ ವಿಪಕ್ಷದ ಇತರ ಸದಸ್ಯರು ಸದನದ ಬಾವಿಯಲ್ಲಿ ತಮ್ಮ ಪ್ರತಿಭಟನೆ ಮುಂದುವರಿಸಿದರು. ಸುಮಾರು ಒಂದೂವರೆ ಗಂಟೆ ಕಾಲದ ಚರ್ಚೆಯ ಸಂದರ್ಭ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವೌನವಾಗಿದ್ದರು. ಬಳಿಕ ಮತ್ತೆ ಉಪಾಧ್ಯಕ್ಷೆ ಕಸ್ತೂರಿ ಪಂಜ ನಿರ್ಣಯ ಮಂಡಿಸುವುದಾಗಿ ಹೇಳಿದಾಗ, ಜಿಲ್ಲಾಪಂಚಾಯತ್ ನಿರ್ಣಯದಿಂದ ತಪ್ಪು ಮಾಡದವರಿಗೆ ಏನೂ ಆಗುವುದಿಲ್ಲ ಎಂದು ಅಧ್ಯಕ್ಷೆ ಮೀನಾಕ್ಷಿ ಾಂತಿಗೋಡು ನಿರ್ಣಯಕ್ಕೆ ಸೂಚಿಸಿದರು.

ಆ ಸಂದರ್ಭ ಮತ್ತೆ ಸದನಕ್ಕೆ ಹಾಜರಾದ ಆಡಳಿತ ಪಕ್ಷದ ಸದಸ್ಯರು ನಿರ್ಣಯಕ್ಕೆ ಬೆಂಬಲ ಸೂಚಿಸಿದರು. ವಿಪಕ್ಷ ಸದಸ್ಯರು ಜಿಲ್ಲಾ ಪಂಚಾಯತ್‌ನ ಸರ್ವಾಧಿಕಾರಿ ಧೋರಣೆಗೆ ಧಿಕ್ಕಾರ ಎಂದರು. ಕೊನೆಗೂ ಗದ್ದಲದ ನಡುವೆ ಹಳೆಯಂಗಡಿ ಪಂಚಾಯತನ್ನು ಬರ್ಕಾಸ್ತುಗೊಳಿಸುವ ಬ್ಗೆ ನಿರ್ಣಯವನ್ನು ಪ್ರಕಟಿಸಲಾಯಿತು.

ಬಹುಮತ ಇದ್ದರೆ ಏನನ್ನೂ ಮಾಡುತ್ತೀರಿ ಎಂಬುದನ್ನು ಸಾಬೀತು ಪಡಿಸಿದ್ದೀರಿ ಎಂದು ಈ ಸಂದರ್ಭದಲ್ಲಿಯೂ ಸದಸ್ಯೆ ಮಮಾ ಗಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರಾದ ಇಬ್ರಾಹೀಂ, ಜನಾರ್ದನ ಗೌಡ, ಅನಿತಾ ಹೇಮನಾಥ್, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಉಪಸ್ಥಿತರಿದ್ದರು.

ಚರ್ಚೆಯುದ್ದಕ್ಕೂ ಅಧ್ಯಕ್ಷರ ಮೌನ !

ಹಳೆಯಂಗಡಿ ಗ್ರಾ.ಪಂ. ಬರ್ಕಾಸ್ತುಗೊಳಿಸುವ ಕುರಿತಂತೆ ಆಡಳಿತ ಹಾಗೂ ವಿಪಕ್ಷ ಸದಸ್ಯ ನಡುವಿನ ಚರ್ಚೆ, ವಾಗ್ವಾದದ ವೇಳೆ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮೌನ ವಹಿಸುವ ಮೂಲಕ ಗಮನ ಸೆಳೆದರು.

ಒಂದು ಹಂತದಲ್ಲಿ ಬರ್ಕಾಸ್ತು ತೀರ್ಮಾನ ಕೈಗೊಳ್ಳಲು ಅಸಾಧ್ಯವಾದರೆ ವೇದಿಕೆಯಿಂದ ಇಳಿಯಿರಿ ಎಂದು ಆಡಳಿತ ಪಕ್ಷದ ಹಿರಿಯ ಸದಸ್ಯ ಕೊರಗಪ್ಪ ನಾಯ್ಕ ಸಹಿತ ಅನೇಕ ಸದಸ್ಯರು ಒತ್ತಾಯಿಸಿದ ಪ್ರಸಂಗವೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News