×
Ad

ರೈಲ್ವೆ ನಿಲ್ದಾಣದಲ್ಲಿ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ ನಡೆಸಿದ ಗುಂಪು

Update: 2019-09-16 20:03 IST

ಗಾಝಿಯಾಬಾದ್, ಸೆ. 16: ಮುಸ್ಲಿಂ ಕುಟುಂಬದ ನಾಲ್ವರು ಸದಸ್ಯರ ಮೇಲೆ 10ರಿಂದ 12 ಜನರಿದ್ದ ಗುಂಪು ಹಲ್ಲೆ ನಡೆಸಿದ ಘಟನೆ ಅಲಿಗಢ ರೈಲ್ವೆ ನಿಲ್ದಾಣದಲ್ಲಿ ರವಿವಾರ ಅಪರಾಹ್ನ ಸಂಭವಿಸಿದೆ.

 ಈ ಬಗ್ಗೆ ಗಾಝಿಯಾಬಾದ್ ರೈಲ್ವೆ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ಕನೌಜ ಸಮೀಪದ ಗ್ರಾಮದ ನಿವಾಸಿ ಸಾಹಿಮ್ ಖಾನ್ ತನ್ನ ಕುಟುಂಬದೊಂದಿಗೆ ಕಾನ್ಪುರ-ಆನಂದ ವಿಹಾರ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿ ಅಲಿಗಢ ಜಂಕ್ಷನ್‌ ನಲ್ಲಿ ಸಂಜೆ 4.30ಕ್ಕೆ ಇಳಿದಿದ್ದರು. ಈ ಸಂದರ್ಭ 10ರಿಂದ 12 ಜನರಿದ್ದ ಗುಂಪು ಫ್ಲ್ಯಾಟ್‌ಫಾರ್ಮ್‌ನಲ್ಲಿ ಅವರ ಮೇಲೆ ದಾಳಿ ನಡೆಸಿತು. ಸಾಹಿಮ್ ಖಾನ್ ಅವರ ಸೋದರಳಿಯ ತೌಫೀಕ್ ಖಾನ್‌ಗೆ ಗಾಯಗಳಾಗಿವೆ. ಅವರ ಪತ್ನಿಯರ ಮೇಲೆ ಕೂಡ ಗುಂಪು ಹಲ್ಲೆ ನಡೆಸಿದೆ. ಗಾಯಗೊಂಡವರನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಜವಾಹರ್‌ಲಾಲ್ ನೆಹರೂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ.

 ‘‘ಜವಾಹರ್‌ಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಮಕ್ಕಳಿಗೆ ಚಿಕಿತ್ಸೆ ಒದಗಿಸಲು ಕುಟುಂಬ ಇಲ್ಲಿಗೆ ಆಗಮಿಸಿತ್ತು. ಸಾಹಿಮ್ ಖಾನ್ ಅವರ ಪುತ್ರಿಗೆ ಮಾನಸಿಕ ಸಮಸ್ಯೆ ಇದೆ. ಪುತ್ರನಿಗೆ ಪಿತ್ತಕೋಶದ ಕಾಯಿಲೆ ಇದೆ. ಗುಂಪು ತೌಫೀಕ್ ಖಾನ್ ಮೇಲೆ ಕಲ್ಲಿನಿಂದ ದಾಳಿ ನಡೆಸಿದೆ. ಇದರಿಂದ ಅವರ ತಲೆಗೆ ಗಾಯಗಳಾಗಿವೆ. ಸಾಹಿಮ್ ಖಾನ್ ಹಾಗೂ ಇನ್ನೊಬ್ಬರು ಮಹಿಳೆಗೆ ಥಳಿಸಲಾಗಿದೆ. ದಾಳಿಯ ಸಂದರ್ಭ ಸಾಹಿಮ್ ಖಾನ್ ಅವರ ಪುತ್ರಿ ಫ್ಲಾಟ್‌ಪೋರ್ಮ್‌ನಲ್ಲಿ ಅಸ್ವಸ್ಥರಾದರು’’ ಎಂದು ಸಾಹಿಮ್ ಖಾನ್‌ನ ಸಂಬಂಧಿ ಮುಕರ್ರಂ ಅಲಿ ಹೇಳಿದ್ದಾರೆ.

 ‘‘ರೈಲಿನಿಂದ ಬಂದವರು ದಾಳಿ ನಡೆಸಿರುವುದು ಅಲ್ಲ. ಹೊರಗಿನಿಂದ ಬಂದವರು ದಾಳಿ ನಡೆಸಿರುವುದು. ಬುರ್ಕಾ ಹಾಕಿದ್ದ ಮಹಿಳೆಯರನ್ನು ಗುರಿಯಾಗಿರಿಸಿ ದಾಳಿ ನಡೆಸಲು ಅವರು ಆಗಮಿಸಿದ್ದರು. ಪೊಲೀಸರು ಬೆನ್ನಟ್ಟಿದಾಗ ಪರಾರಿಯಾದರು’’ ಎಂದು ಅಲಿ ಪ್ರತಿಪಾದಿಸಿದ್ದಾರೆ.

ಸಾಹಿಮ್ ಖಾನ್ ರೈತ. ರೈಲು ಪ್ರಯಾಣದ ಸಂದರ್ಭ ಅವರ ಕುಟುಂಬ ಸಹ ಪ್ರಯಾಣಿಕರೊಂದಿಗೆ ಯಾವುದೇ ವಾಗ್ವಾದ ಮಾಡಿಲ್ಲ. ನಗರಕ್ಕೆ ತೌಫೀಕ್ ಖಾನ್ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಅವರನ್ನು ಈ ರೀತಿ ಸ್ವಾಗತಿಸಲಾಯಿತು ಎಂದು ಅಲಿ ಹೇಳಿದ್ದಾರೆ.

 ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಯಶ್‌ಪಾಲ್ ಸಿಂಗ್ ತಿಳಿಸಿದ್ದಾರೆ. ಆರೋಪಿಗಳ ಗುರುತು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ವಾಗ್ವಾದದ ಪ್ರಕರಣ ಎಂದು ಕಾಣುತ್ತಿದೆ. ವಾಗ್ವಾದ ದಾಳಿಗೆ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News