×
Ad

ನ್ಯಾ.ಕುರೇಷಿ ಪದೋನ್ನತಿ ಕುರಿತು ಕೊಲಿಜಿಯಂ ನಿರ್ಧಾರ ಕೈಗೊಂಡಿದೆ: ಸುಪ್ರೀಂ ಕೋರ್ಟ್

Update: 2019-09-16 20:13 IST

ಹೊಸದಿಲ್ಲಿ,ಸೆ.16: ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಅಕಿಲ್ ಕುರೇಷಿಯವರ ಪದೋನ್ನತಿಯ ಕುರಿತು ಕೊಲಿಜಿಯಂ ನಿರ್ಧಾರವೊಂದನ್ನು ಕೈಗೊಂಡಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಹೇಳಿದೆ.

ಕೊಲಿಜಿಯಂ ನಿರ್ಧಾರವನ್ನು ಶೀಘ್ರವೇ ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುವುದು ಎಂದು ಮುಖ್ಯ ನ್ಯಾ.ರಂಜನ್ ಗೊಗೊಯಿ ನೇತೃತ್ವದ ಪೀಠವು ತಿಳಿಸಿತು.

ನ್ಯಾ.ಕುರೇಷಿಯವರ ಪದೋನ್ನತಿಗಾಗಿ ಕೊಲಿಜಿಯಂ ಶಿಫಾರಸಿನ ಕುರಿತು ಕಾನೂನು ಮತ್ತು ನ್ಯಾಯ ಸಚಿವಾಲಯದಿಂದ ಪತ್ರವೊಂದನ್ನು ತಾನು ಸ್ವೀಕರಿಸಿರುವುದಾಗಿ ಸರ್ವೋಚ್ಚ ನ್ಯಾಯಾಲಯವು ಆ.28ರಂದು ಹೇಳಿತ್ತು.

ಕೊಲಿಜಿಯಂ ಮೇ 10ರಂದೇ ಪದೋನ್ನತಿ ಶಿಫಾರಸನ್ನು ಮಾಡಿದ್ದರೂ ಕೇಂದ್ರವು ನ್ಯಾ.ಕುರೇಷಿ ಅವರ ಹೆಸರನ್ನು ಅಧಿಸೂಚಿಸಿಲ್ಲ ಎಂದು ಗುಜರಾತ್ ಹೈಕೋರ್ಟ್ ವಕೀಲರ ಸಂಘ (ಜಿಎಚ್‌ಸಿಎಎ)ವು ತನ್ನ ಅರ್ಜಿಯಲ್ಲಿ ಹೇಳಿದೆ.

ನ್ಯಾ.ಕುರೇಷಿಯವರ ಪದೋನ್ನತಿಗಾಗಿ ಮೇ 10ರ ಕೊಲಿಜಿಯಂ ಶಿಫಾರಸಿನ ಕುರಿತು ಒಂದು ವಾರದೊಳಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುವುದಾಗಿ ಆ.16ರಂದು ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

 ಕೇಂದ್ರವು ನ್ಯಾ.ಕುರೇಷಿಯವರ ನೇಮಕಾತಿಯ ಕಡತವನ್ನು ವಿಲೇವಾರಿ ಮಾಡಿಲ್ಲ ಮತ್ತು ನ್ಯಾ.ರವಿಶಂಕರ್ ಅವರನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಪ್ರಭಾರ ಮುಖ್ಯ ನ್ಯಾಯಾಧೀಶರನ್ನ್ನಾಗಿ ನೇಮಿಸಿ ಜೂ.7ರಂದು ಅಧಿಸೂಚನೆಯನ್ನು ಹೊರಡಿಸಿದೆ ಎಂದು ಜಿಎಚ್‌ಸಿಎಎ ಅರ್ಜಿಯಲ್ಲಿ ಹೇಳಿದೆ.

ಕೊಲಿಜಿಯಂ ನಿರ್ಣಯವನ್ನು ಅನುಷ್ಠಾನಿಸಲು ಕೇಂದ್ರಕ್ಕೆ ನಿರ್ದೇಶ ನೀಡುವಂತೆ ಅದು ಕೋರಿಕೊಂಡಿದೆ.

ಇತರ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧಿಶರ ನೇಮಕಾತಿಗೆ ಕೇಂದ್ರವು ಒಪ್ಪಿಗೆ ನೀಡಿದೆ ಎಂದು ಅದು ಆರೋಪಿಸಿದ್ದು,ಮೇ 10ರ ಬಳಿಕ ವಿವಿಧ ಉಚ್ಚ ನ್ಯಾಯಾಲಯಗಳಿಗೆ 18 ಇತರ ಹೆಚ್ಚುವರಿ ನ್ಯಾಯಾಧೀಶರನ್ನು ನೇಮಕ ಮಾಡಿರುವುದನ್ನು ಅರ್ಜಿಯಲ್ಲಿ ಪ್ರಮುಖವಾಗಿ ಬಿಂಬಿಸಲಾಗಿದೆ.

ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನಾಗಿ ನ್ಯಾ.ಕುರೇಷಿ ಅವರ ನೇಮಕಾತಿಗೆ ಕೇಂದ್ರವು ಹಿಂದೇಟು ಹಾಕುತ್ತಿರುವುದು ಸ್ಥಾಪಿತ ವಿಧಿವಿಧಾನಗಳಿಗೆ ವಿರುದ್ಧವಾಗಿದೆ ಮತ್ತು ಸಂವಿಧಾನದ 14 ಮತ್ತು 217ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದಿರುವ ಜಿಎಚ್‌ಸಿಎಎ,ಕೇಂದ್ರದ ನಿಷ್ಕ್ರಿಯತೆಯು ನ್ಯಾಯಾಂಗದ ಸ್ವಾತಂತ್ರ್ಯ ದ ಮೇಲಿನ ದಾಳಿಯಾಗಿದೆ ಮತ್ತು ಉಚ್ಚ ನ್ಯಾಯಾಲಯಗಳು ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆ ವಿಷಯಗಳಲ್ಲಿ ನ್ಯಾಯಾಂಗದ ಪ್ರಾಮುಖ್ಯತೆಯನ್ನು ಕುಂದಿಸಿದೆ ಎಂದಿದೆ.

ಕೊಲೆ ಪ್ರಕರಣದಲ್ಲಿ ಹಾಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪೊಲೀಸ್ ಕಸ್ಟಡಿಯನ್ನು ವಿಧಿಸಿ 2010ರಲ್ಲಿ ಆದೇಶವನ್ನು ಹೊರಡಿಸಿದ್ದಕ್ಕಾಗಿ ನ್ಯಾ.ಕುರೇಷಿ ಅವರ ವಿರುದ್ಧ ತಾರತಮ್ಯವೆಸಗಲಾಗುತ್ತಿದೆ ಎಂದು ಜಿಎಚ್‌ಸಿಎಎಅಧ್ಯಕ್ಷ ಯತಿನ್ ಓಝಾ ಅವರು ಹೇಳಿರುವುದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News