ಉ.ಪ್ರದೇಶದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ನಿರ್ಧಾರ: ಆದಿತ್ಯನಾಥ್

Update: 2019-09-16 15:36 GMT

ಲಕ್ನೊ, ಸೆ.16: ರಾಜ್ಯದಲ್ಲಿ ಹಂತ ಹಂತವಾಗಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಜಾರಿಗೊಳಿಸುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನ ಆದೇಶದಂತೆ ಎನ್‌ಆರ್‌ಸಿ ಯನ್ನು ಅಸ್ಸಾಂನಲ್ಲಿ ಜಾರಿಗೊಳಿಸುವ ಧೈರ್ಯದ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಅಭಿನಂದಿಸುತ್ತೇನೆ. ಇದೇ ರೀತಿ ಉತ್ತರಪ್ರದೇಶದಲ್ಲೂ ಎನ್‌ಆರ್‌ ಸಿಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಆದಿತ್ಯನಾಥ್ ಹೇಳಿದರು.

  ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ತನ್ನ ಸರಕಾರ ಗೌರವಿಸುತ್ತದೆ ಎಂದ ಅವರು, ರಾಜ್ಯದಲ್ಲಿ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಯನ್ನು ರೂಪಿಸಲಾಗಿದೆ. ಉತ್ತರಪ್ರದೇಶವನ್ನು 1 ಟ್ರಿಲಿಯನ್ ಆರ್ಥಿಕತೆಯ ರಾಜ್ಯವನ್ನಾಗಿಸಲು ಸಂಕಲ್ಪಿಸಲಾಗಿದೆ. ಈಗ ಸಾಗುತ್ತಿರುವ ವೇಗವೇ ಮುಂದುವರಿದರೆ ಇದಕ್ಕೆ 12 ವರ್ಷ ಬೇಕಾಗುತ್ತದೆ. ಆದ್ದರಿಂದ ಇನ್ನಷ್ಟು ವೇಗದಲ್ಲಿ ಸಾಗಿ ಮುಂದಿನ 6 ವರ್ಷದೊಳಗೆ ಗುರಿ ಸಾಧಿಸಬೇಕಿದೆ ಎಂದರು. ರಾಜ್ಯದಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಕೊರತೆಯಿಲ್ಲ ಎಂದು ಆದಿತ್ಯನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News