ಮ್ಯಾನ್ಮಾರ್‌ನಲ್ಲಿ ಉಳಿದಿರುವ ರೊಹಿಂಗ್ಯನ್ನರಿಗೆ ಈಗಲೂ ‘ಜನಾಂಗೀಯ ಹತ್ಯೆಯ’ ಅಪಾಯ

Update: 2019-09-16 16:13 GMT

ಯಾಂಗನ್ (ಮ್ಯಾನ್ಮಾರ್), ಸೆ. 16: ಮ್ಯಾನ್ಮಾರ್‌ನಲ್ಲಿ ಉಳಿದಿರುವ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ಈಗಲೂ ‘ಗಂಭೀರ ಜನಾಂಗೀಯ ಹತ್ಯೆ’ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ತಪಾಸಕರು ಸೋಮವಾರ ಹೇಳಿದ್ದಾರೆ. ಅದೇ ವೇಳೆ, ಮ್ಯಾನ್ಮಾರ್ ಸೇನೆಯು ಈಗಾಗಲೇ ದೇಶದಿಂದ ಹೊರದಬ್ಬಿರುವ ಸುಮಾರು 10 ಲಕ್ಷ ರೊಹಿಂಗ್ಯಾ ನಿರಾಶ್ರಿತರ ವಾಪಸಾತಿ ‘ಅಸಂಭವ’ವಾಗಿಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಿಂದ ಸ್ಥಾಪಿಸಲ್ಪಟ್ಟಿರುವ ಮ್ಯಾನ್ಮಾರ್ ಸತ್ಯಶೋಧನಾ ಸಮಿತಿಯು, 2017ರ ಸೇನಾ ದಮನ ಕಾರ್ಯಾಚರಣೆಯನ್ನು ಕಳೆದ ವರ್ಷ ‘ಜನಾಂಗೀಯ ಹತ್ಯೆ’ ಎಂಬುದಾಗಿ ಬಣ್ಣಿಸಿತ್ತು ಹಾಗೂ ಸೇನಾ ಮುಖ್ಯಸ್ಥ ಮಿನ್ ಆಂಗ್ ಹಲೈಂಗ್ ಸೇರಿದಂತೆ ಉನ್ನತ ಸೇನಾ ನಾಯಕರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿತ್ತು.

ಮ್ಯಾನ್ಮಾರ್‌ನ ಉರಿಯುತ್ತಿರುವ ಗ್ರಾಮಗಳು, ಹತ್ಯೆ, ಅತ್ಯಾಚಾರ ಮತ್ತು ಚಿತ್ರಹಿಂಸೆಗೆ ಬೆದರಿ ಸುಮಾರು 7,40,000 ರೊಹಿಂಗ್ಯಾ ನಿರಾಶ್ರಿತರು ಗಡಿ ದಾಟಿ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಅದಕ್ಕೂ ಮುನ್ನವೂ ಹಲವು ಲಕ್ಷ ರೊಹಿಂಗ್ಯಾ ನಿರಾಶ್ರಿತರು ಮ್ಯಾನ್ಮಾರ್‌ಗೆ ಪಲಾಯನಗೈದಿದ್ದರು.

ಇನ್ನೂ ಸುಮಾರು 6 ಲಕ್ಷ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಇದ್ದಾರೆ ಹಾಗೂ ಅವರ ಪರಿಸ್ಥಿತಿ ಹತಾಶವಾಗಿದೆ ಎಂದು ವಿಶ್ವಸಂಸ್ಥೆಯ ತಂಡ ತನ್ನ ಕಟು ವರದಿಯಲ್ಲಿ ಹೇಳಿದೆ.

 ‘‘ಮ್ಯಾನ್ಮಾರ್‌ನ ಜನಾಂಗೀಯ ಹತ್ಯೆ ಪ್ರವೃತ್ತಿ ಈಗಲೂ ಮುಂದುವರಿದಿದೆ ಹಾಗೂ ಅಲ್ಲಿ ಈಗಲೂ ವಾಸಿಸುತ್ತಿರುವ ರೊಹಿಂಗ್ಯಾಗಳು ಜನಾಂಗೀಯ ಹತ್ಯೆಯ ಗಂಭೀರ ಅಪಾಯವನ್ನು ಎದುರಿಸುತ್ತಿದ್ದಾರೆ’’ ಎಂದು ಮ್ಯಾನ್ಮಾರ್ ಕುರಿತ ತಮ್ಮ ಅಂತಿಮ ವರದಿಯಲ್ಲಿ ವಿಶ್ವಸಂಸ್ಥೆಯ ತಪಾಸಕರು ಅಭಿಪ್ರಾಯಪಟ್ಟಿದ್ದಾರೆ.

ಈ ವರದಿಯನ್ನು ಜಿನೀವದಲ್ಲಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆಯಲ್ಲಿ ಮಂಗಳವಾರ ಮಂಡಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News