‘ಹೌಡೀ ಮೋದಿ’ ಕಾರ್ಯಕ್ರಮದಲ್ಲಿ ಮೋದಿ ಜೊತೆಗೆ ಭಾಗವಹಿಸುವ ಟ್ರಂಪ್

Update: 2019-09-16 16:20 GMT

ವಾಶಿಂಗ್ಟನ್, ಸೆ. 16: ಅಮೆರಿಕದ ಹ್ಯೂಸ್ಟನ್‌ನಲ್ಲಿ ಸೆಪ್ಟಂಬರ್ 22ರಂದು ನಡೆಯಲು ನಿಗದಿಯಾಗಿರುವ ಬೃಹತ್ ‘ಹೌಡೀ ಮೋದಿ’ (‘ಮೋದಿ ಹೇಗಿದ್ದೀರಾ’ ಎಂಬುದರ ಹೃಸ್ವ ರೂಪ) ಸಮಾವೇಶದಲ್ಲಿ ಭಾಗವಹಿಸುವ ಇಚ್ಛೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸೋಮವಾರ ವ್ಯಕ್ತಪಡಿಸಿದ್ದಾರೆ.

50,000ಕ್ಕೂ ಅಧಿಕ ಅಮೆರಿಕನ್ ಭಾರತೀಯರು ಭಾಗವಹಿಸುವುದಾಗಿ ನೋಂದಾಯಿಸಿರುವ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸುತ್ತಾರೆ ಎಂದು ಶ್ವೇತಭವನ ಖಚಿತಪಡಿಸಿದೆ.

ಈ ಎರಡು ಬೃಹತ್ ಪ್ರಜಾಸತ್ತೆಗಳ ನಾಯಕರು ವಿಶ್ವದ ಯಾವುದೇ ಭಾಗದಲ್ಲಿ ಜಂಟಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುವುದು ಇದೇ ಮೊದಲ ಬಾರಿಯಾಗಿದೆ. ಟ್ರಂಪ್ ಆಡಳಿತದಲ್ಲಿ ಅಮೆರಿಕ ಮತ್ತು ಭಾರತಗಳ ಬೆಳೆಯುತ್ತಿರುವ ಆತ್ಮೀಯತೆಯನ್ನು ಇದು ಈ ಸಮಾವೇಶ ಎತ್ತಿ ಹಿಡಿಯಲಿದೆ.

ಹ್ಯೂಸ್ಟನ್‌ನ ವಿಶಾಲ ಎನ್‌ಆರ್‌ಜಿ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ‘ಹೌಡೀ ಮೋದಿ! ಶೇರ್ಡ್‌ ಡ್ರೀಮ್ಸ್, ಬ್ರೈಟ್ ಫ್ಯೂಚರ್ಸ್’ ಸಮಾವೇಶದಲ್ಲಿ ಅಮೆರಿಕದಾದ್ಯಂತದ ಭಾರತೀಯ ಅಮೆರಿಕನ್ನರು ಭಾಗವಹಿಸಲಿದ್ದಾರೆ.

 ‘ಹೌಡೀ ಮೋದಿ’ ಸಮಾವೇಶದಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡಿರುವ ನಿರ್ಧಾರವು ‘ವಿಶೇಷ ಭಾವನೆಯ ದ್ಯೋತಕ’ವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

‘‘ಇದು ಭಾರತ ಮತ್ತು ಅಮೆರಿಕದ ನಡುವಿನ ವಿಶೇಷ ಸ್ನೇಹದ ಸೂಚಕವಾಗಿದೆ’’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ‘‘ಸಮಾವೇಶದಲ್ಲಿ ಅವರನ್ನು ಸ್ವಾಗತಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ’’ ಎಂದು ಅವರು ಹೇಳಿದ್ದಾರೆ.

‘‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟಂಬರ್ 22ರಂದು ನಡೆಯಲಿರುವ ಸಮುದಾಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಸುದ್ದಿಯಿಂದ ಸಂತೋಷವಾಗಿದೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News