ರಾಷ್ಟ್ರೀಯ ಪಕ್ಷಗಳು ಸ್ವೀಕರಿಸಿದ 400 ಕೋ. ರೂ.ಗಳಿಗೆ ಲೆಕ್ಕವೇ ಇಲ್ಲ !

Update: 2019-09-16 16:24 GMT

 ಹೊಸದಿಲ್ಲಿ, ಸೆ. 16: ಕಳೆದ 5 ವರ್ಷಗಳಲ್ಲಿ ಸ್ವೀಕರಿಸಿದ ಒಟ್ಟು ದೇಣಿಗೆಯಲ್ಲಿ ಶೇ. 20ಕ್ಕೂ ಅಧಿಕ ದೇಣಿಗೆ ಕುರಿತು ರಾಷ್ಟ್ರೀಯ ಪಕ್ಷಗಳು ಅಸಂಪೂರ್ಣ, ತಪ್ಪಾದ ಮಾಹಿತಿಯನ್ನು ಸಲ್ಲಿಸಿವೆ ಅಥವಾ ಪಾನ್ ಕಾರ್ಡ್ ವಿವರ ಸಲ್ಲಿಸಿಲ್ಲ ಎಂದು ರಾಷ್ಟ್ರೀಯ ಪಕ್ಷಗಳು ಸಲ್ಲಿಸಿದ ದೇಣಿಗೆ ವರದಿಗಳನ್ನು ವಿಶ್ಲೇಷಿಸಿದ ಅಸೋಸಿಯೇಶನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ಎಡಿಆರ್)ನ ವಿಶ್ಲೇಷಣೆಯಲ್ಲಿ ಕಂಡು ಬಂದಿದೆ.

 ದೇಣಿಗೆ 20 ಸಾವಿರಕ್ಕಿಂತ ಹೆಚ್ಚಾಗಿದ್ದರೆ ರಾಷ್ಟ್ರೀಯ ಪಕ್ಷಗಳು ದೇಣಿಗೆ ವಿವರ ಸಲ್ಲಿಸುವಾಗ ಫಾರ್ಮ್ 24 ಎಯ ಯಾವುದೇ ಕಾಲಂ ಅನ್ನು ಖಾಲಿ ಬಿಡಬಾರದು ಎಂಬ ಸುಪ್ರೀಂ ಕೋರ್ಟ್‌ನ ತೀರ್ಪಿನ ಉಲ್ಲಂಘನೆ ಇದಾಗಿದೆ.

  ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್ ಹಾಗೂ ಸಿಪಿಐ ಹಾಗೂ ಸಿಪಿಐ (ಮಾಕ್ಸಿಸ್ಟ್) - ಈ 7 ರಾಷ್ಟ್ರೀಯ ಪಕ್ಷಗಳು ಈ ಉಲ್ಲಂಘನೆಯಲ್ಲಿ ಸೇರಿವೆ. 2013-14ರ ಹಾಗೂ 2017-2018 ನಡುವಿನ ಹಣಕಾಸು ವರ್ಷಗಳಲ್ಲಿ ಎಲ್ಲ 7 ಪಕ್ಷಗಳು ಒಟ್ಟು 2,140,36 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿವೆ. ಇದರಲ್ಲಿ 438.96 ಕೋಟಿ ರೂಪಾಯಿ ದೇಣಿಗೆ ನೀಡಿದ ದೇಣಿಗೆಗಾರರ ಯಾವುದೇ ಪಾನ್ ಕಾರ್ಡ್ ವಿವರವನ್ನು ಪಕ್ಷಗಳು ಸಲ್ಲಿಸಿಲ್ಲ. ಅಲ್ಲದೆ, 14.65 ಕೋಟಿ ರೂಪಾಯಿ ದೇಣಿಗೆಗೆ ಅಸಂಪೂರ್ಣ ಹಾಗೂ ತಪ್ಪಾದ ವಿವರಗಳನ್ನು ಸಲ್ಲಿಸಿವೆ.

ಎಡಿಆರ್‌ನ ಪ್ರಕಾರ, ಇದರಲ್ಲಿ ಬಿಜೆಪಿ ಅತಿ ದೊಡ್ಡ ಅಪರಾಧಿ. ಬಿಜೆಪಿ 281.55 ಕೋಟಿ ರೂಪಾಯಿ (ಶೇ. 64.14)ಗೆ ಪಾನ್ ಕಾರ್ಡ್ ವಿವರ ಸಲ್ಲಿಸಿಲ್ಲ. 8.10 ಕೋಟಿ ರೂಪಾಯಿಗೆ ಅಸಂಪೂರ್ಣ ಹಾಗೂ ತಪ್ಪಾದ ಪಾನ್ ಕಾರ್ಡ್ ವಿವರ ಸಲ್ಲಿಸಿದೆ.

 ಬಿಜೆಪಿ ನಂತರದ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಕಾಂಗ್ರೆಸ್ 150.59 ಕೋಟಿ ರೂಪಾಯಿಗೆ ಪಾನ್ ಕಾರ್ಡ್ ವಿವರ ಸಲ್ಲಿಸಿಲ್ಲ. 5.614 ಕೋಟಿ ರೂಪಾಯಿಗೆ ಅಸಂಪೂರ್ಣ ಅಥವಾ ತಪ್ಪಾದ ಪಾನ್ ಕಾರ್ಡ್ ವಿವರ ಸಲ್ಲಿಸಿದೆ.

 ಪಾನ್ ಕಾರ್ಡ್ ವಿವರವನ್ನು ಸಲ್ಲಿಸುವಲ್ಲಿ ನಿರಂತರವಾಗಿ ವಿಫಲವಾಗುವ ಮೂಲಕ ಈ ಪಕ್ಷಗಳು ಸುಪ್ರೀಂ ಕೋರ್ಟ್‌ನ 2013ರ ತೀರ್ಪಿನ ಬಗ್ಗೆ ನಿರ್ಲಕ್ಷ್ಯ ತೋರಿವೆ. ಕಾನೂನಿನಿಂದ ತಪ್ಪಿಸಿಕೊಳ್ಳುವ ಈ ಪ್ರವೃತ್ತಿ ಚುನಾವಣೆ ವರ್ಷಗಳಲ್ಲಿ ಕಂಡು ಬಂದಿದೆ.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ವ್ಯತ್ಯಾಸಗಳು ವರದಿಯಾಗಿವೆ. ಈ ವರ್ಷ ಒಂದರಲ್ಲೇ ಪಕ್ಷಗಳು 275.76 ಕೋಟಿ ರೂಪಾಯಿ ದೇಣಿಗೆಯ ವಿವರ ಸಲ್ಲಿಸಿಲ್ಲ. ಅಲ್ಲದೆ, 6.887 ಕೋಟಿ ರೂಪಾಯಿ ದೇಣಿಗೆಗೆ ತಪ್ಪು ಹಾಗೂ ಅಸಂಪೂರ್ಣ ವಿವರ ಸಲ್ಲಿಸಿವೆ ಎಂದು ಎಡಿಆರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News