ಸ್ಮಿತ್‌ ನಂ.1 ಸ್ಥಾನ ಭದ್ರ

Update: 2019-09-16 17:47 GMT

ದುಬೈ, ಸೆ.16: ಸೋಮವಾರ ಬಿಡುಗಡೆಯಾದ ಬ್ಯಾಟ್ಸ್ ಮನ್‌ಗಳ ಐಸಿಸಿ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನವನ್ನು ಉಳಿಸಿಕೊಂಡರೆ, ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ನಂ.1 ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಒಟ್ಟು 903 ರೇಟಿಂಗ್ ಪಾಯಿಂಟ್ಸ್ ಪಡೆದಿರುವ ಕೊಹ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯದ ಮಾಜಿ ನಾಯಕ ಸ್ಮಿತ್‌ಗಿಂತ (937)34 ಪಾಯಿಂಟ್ಸ್ ಹಿಂದಿದ್ದಾರೆ.

ಸ್ಮಿತ್ ಅವರ ಸಹ ಆಟಗಾರ ಪ್ಯಾಟ್ ಕಮಿನ್ಸ್ ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವ ರಿದಿದ್ದಾರೆ. ಆಸ್ಟ್ರೇಲಿಯ ಆ್ಯಶಸ್ ಕಪ್‌ನ್ನು ತನ್ನಲ್ಲೇ ಉಳಿಸಿಕೊ ಳ್ಳಲು ಸ್ಮಿತ್ ಹಾಗೂ ಕಮಿನ್ಸ್ ಪ್ರಮುಖ ಪಾತ್ರವಹಿಸಿದ್ದರು.

ರವಿವಾರ ಐದನೇ ಹಾಗೂ ಅಂತಿಮ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 135 ರನ್‌ಗಳಿಂದ ಜಯ ಸಾಧಿಸಿ ಸರಣಿಯನ್ನು 2-2ರಿಂದ ಸಮಬಲಗೊಳಿಸಿತು. ಆದಾಗ್ಯೂ ಸರಣಿಯಲ್ಲಿ ಮುನ್ನಡೆ ಪಡೆದಿದ್ದ ಆಸೀಸ್ ಆ್ಯಶಸ್ ಕಪ್‌ನ್ನು ತನ್ನಲ್ಲೇ ಉಳಿಸಿಕೊಂಡಿತು. ಅಂತಿಮ ಟೆಸ್ಟ್‌ನಲ್ಲಿ 80 ಹಾಗೂ 23 ರನ್ ಗಳಿಸಿದ್ದ ಸ್ಮಿತ್ 937 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ.

ಆ್ಯಶಸ್ ಸರಣಿ ಆರಂಭವಾಗುವ ಮೊದಲು ಸ್ಮಿತ್ ಬ್ಯಾಟ್ಸ್‌ಮನ್‌ಗಳ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 774 ರನ್ ಗಳಿಸಿದ ಸ್ಮಿತ್ ಪಾಯಿಂಟ್ಸ್ ಗಳಿಕೆಯಲ್ಲೂ ಮೇಲುಗೈ ಸಾಧಿಸಿದರು.

 ಆ್ಯಶಸ್ ಸರಣಿಯಲ್ಲಿ ಒಟ್ಟು 29 ವಿಕೆಟ್‌ಗಳನ್ನು ಪಡೆದು ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ ಕಮಿನ್ಸ್ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ದ.ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡಗಿಂತ 57 ಅಂಕ ಮುನ್ನಡೆಯಲ್ಲಿದ್ದಾರೆ. ಭಾರತದ ಜಸ್‌ಪ್ರೀತ್ ಬುಮ್ರಾ ಮೂರನೇ ಸ್ಥಾನದಲ್ಲಿದ್ದಾರೆ.

ರ್ಯಾಂಕಿಂಗ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಆಸ್ಟ್ರೇಲಿಯದ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳೆಂದರೆ: ಮ್ಯಾಥ್ಯೂ ವೇಡ್ ಹಾಗೂ ಮಿಚೆಲ್ ಮಾರ್ಷ್. ನಾಲ್ಕನೇ ಶತಕ ಸಿಡಿಸಿದ್ದ ವೇಡ್ 32 ಸ್ಥಾನ ಭಡ್ತಿ ಪಡೆದು 78ನೇ ಸ್ಥಾನಕ್ಕೇರಿದರು. 2013ರ ಮಾರ್ಚ್ ಬಳಿಕ ಶ್ರೇಷ್ಠ ಸಾಧನೆ ಮಾಡಿದರು. ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದ ಮಾರ್ಷ್ 20 ಸ್ಥಾನ ಭಡ್ತಿ ಪಡೆದು 54ನೇ ಸ್ಥಾನ ತಲುಪಿದರು. 2017ರ ಮಾರ್ಚ್ ಬಳಿಕ ಉತ್ತಮ ಸಾಧನೆ ಮಾಡಿದರು.

ಬ್ಯಾಟ್ಸ್‌ಮನ್‌ಗಳ ಪೈಕಿ ಡೇವಿಡ್ ವಾರ್ನರ್ ಏಳು ಸ್ಥಾನಗಳನ್ನು ಕಳೆದುಕೊಂಡು 24ನೇ ಸ್ಥಾನಕ್ಕೆ ಇಳಿದರು. ಆ್ಯಶಸ್ ಸರಣಿಯ 10 ಇನಿಂಗ್ಸ್‌ಗಳಲ್ಲಿ ಕೇವಲ 95 ರನ್ ಗಳಿಸಿದ್ದ ವಾರ್ನರ್ 19 ಸ್ಥಾನ ಕಳೆದುಕೊಂಡಿದ್ದಾರೆ. ಸರಣಿ ಆರಂಭಕ್ಕೆ ಮೊದಲು 5ನೇ ಸ್ಥಾನದಲ್ಲಿದ್ದರು.

ಆಸ್ಟ್ರೇಲಿಯ ವಿರುದ್ಧ 5ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್ ಗೊಂಚಲು ಪಡೆದಿದ್ದ ಇಂಗ್ಲೆಂಡ್‌ನ ವೇಗದ ಬೌಲರ್ ಜೋಫ್ರಾ ಆರ್ಚರ್ ಮೊತ್ತ ಮೊದಲ ಬಾರಿ ಅಗ್ರ-40ರಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಎಡಗೈ ವೇಗಿ ಸ್ಯಾಮ್‌ಕರನ್ ಆರು ಸ್ಥಾನ ಭಡ್ತಿ ಪಡೆದು 65ನೇ ಸ್ಥಾನಕ್ಕೇರಿದರು.

70 ಹಾಗೂ 47 ರನ್ ಗಳಿಸಿದ್ದ ಜೋಸ್ ಬಟ್ಲರ್ ಈ ವರ್ಷದ ಜನವರಿಯ ಬಳಿಕ ಮೊದಲ ಬಾರಿ ಅಗ್ರ-30ರಲ್ಲಿ ಸ್ಥಾನ ಪಡೆದರು. ಜೀವನಶ್ರೇಷ್ಠ 94 ರನ್ ಗಳಿಸಿದ್ದ ಜೋ ಡೆನ್ಲಿ ಮೊದಲ ಬಾರಿ 57ನೇ ಸ್ಥಾನ ತಲುಪಿದರು. ರೋರಿ ಬರ್ನ್ಸ್ ಐದು ಸ್ಥಾನ ಮೇಲಕ್ಕೇರಿ 56ನೇ ಸ್ಥಾನ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News