ಸುಮಿತ್ ಜೀವನಶ್ರೇಷ್ಠ ಸಾಧನೆ

Update: 2019-09-16 17:57 GMT

ಹೊಸದಿಲ್ಲಿ, ಸೆ.16: ಭಾರತದ ಉದಯೋನ್ಮುಖ ಆಟಗಾರ ಸುಮಿತ್ ನಗಾಲ್ 15 ಸ್ಥಾನ ಭಡ್ತಿ ಪಡೆದು ಸೋಮವಾರ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 159ನೇ ರ್ಯಾಂಕಿಗೆ ತಲುಪಿದರು.

ಹರ್ಯಾಣದ 22ರ ಹರೆಯದ ನಗಾಲ್ ಕಳೆದ ತಿಂಗಳು ನಡೆದ ಯು.ಎಸ್. ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಕಾಣಿಸಿಕೊಂಡ ಬಳಿಕ ಬಂಜಾ ಲುಕಾ ಎಟಿಪಿ ಚಾಲೆಂಜ್ ಟೆನಿಸ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಎನಿಸಿಕೊಂಡರು.

ಯುಎಸ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಸ್ವಿಸ್ ಟೆನಿಸ್ ಮಾಂತ್ರಿಕ ರೋಜರ್ ಫೆಡರರ್ ವಿರುದ್ಧ ಸೋತು ನಿರ್ಗಮಿಸಿದ ಬಳಿಕ 16 ಸ್ಥಾನ ಭಡ್ತಿ ಪಡೆದಿದ್ದರು. ಇದೇ ವೇಳೆ ಪ್ರಜ್ಞೇಶ್ ಗುಣೇಶ್ವರನ್ ಮೂರು ಸ್ಥಾನ ಭಡ್ತಿ ಪಡೆದು 82ನೇ ಸ್ಥಾನಕ್ಕೇರಿದರು. ರಾಮಕುಮಾರ್ ರಾಮನಾಥನ್ ಮೂರು ಸ್ಥಾನ ಕೆಳಜಾರಿ 179ನೇ ಸ್ಥಾನ ತಲುಪಿದರು. ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಹಾಗೂ ಡಿವಿಜ್ ಶರಣ್ ಕ್ರಮವಾಗಿ 43ನೇ ಹಾಗೂ 49ನೇ ಸ್ಥಾನದಲ್ಲಿದ್ದಾರೆ. ಹಿರಿಯ ಆಟಗಾರ ಲಿಯಾಂಡರ್ ಪೇಸ್ ಒಂದು ಸ್ಥಾನ ಮೇಲಕ್ಕೇರಿ 78ನೇ ಸ್ಥಾನದಲ್ಲಿದ್ದಾರೆ.

ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಅಂಕಿತಾ ರೈನಾ 191ನೇ ಸ್ಥಾನವನ್ನು ಅಲಂಕರಿಸುವ ಮೂಲಕ ಭಾರತದ ಅಗ್ರಮಾನ್ಯ ರ್ಯಾಂಕಿನ ಸಿಂಗಲ್ಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆಯನ್ನು ಕಾಯ್ದುಕೊಂಡಿದ್ದಾರೆ. ಪ್ರಾಂಜಲಾ ಯಡ್ಲಪಲ್ಲಿ 338ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News