​ಕಳೆದ ವರ್ಷ ಅಪಘಾತಗಳಲ್ಲಿ ಬಲಿಯಾದ ಹೆಲ್ಮೆಟ್‌ ರಹಿತ ಸವಾರರೆಷ್ಟು ಗೊತ್ತೇ ?

Update: 2019-09-17 03:45 GMT

ಹೊಸದಿಲ್ಲಿ: ಕಳೆದ ವರ್ಷ ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ 43,600 ಮಂದಿ ಹೆಲ್ಮೆಟ್‌ ರಹಿತ ಸವಾರರು ಜೀವ ಕಳೆದುಕೊಂಡಿದ್ದಾರೆ.

ಹಿಂದಿನ ವರ್ಷ 35,975 ಮಂದಿ ಹೆಲ್ಮೆಟ್‌ ರಹಿತ ದ್ವಿಚಕ್ರ ವಾಹನ ಸವಾರರು ಬಲಿಯಾಗಿದ್ದು, ಈ ಪ್ರಮಾಣಕ್ಕೆ ಹೋಲಿಸಿದರೆ 2018ರಲ್ಲಿ ಶೇಕಡ 21ರಷ್ಟು ಅಧಿಕ ಹೆಲ್ಮೆಟ್‌ ರಹಿತ ಸವಾರರು ಅಪಘಾತಗಳಿಗೆ ಬಲಿಯಾಗಿದ್ದಾರೆ. ಇದೇ ವೇಳೆ 15,360 ಹೆಲ್ಮೆಟ್‌ ರಹಿತ ಹಿಂಬದಿ ಸವಾರರು ಕೂಡಾ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ.

ರಾಜ್ಯ ಸರ್ಕಾರಗಳು ನೀಡಿದ ಅಂಕಿ ಅಂಶಗಳಿಂದ, ಜೀವ ಉಳಿಸುವಲ್ಲಿ ಹೆಲ್ಮೆಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ಸಾಬೀತಾದಂತಾಗಿದೆ. ಗುಜರಾತ್ ಹಾಗೂ ಜಾರ್ಖಂಡ್ ರಾಜ್ಯಗಳು ಹಿಂಬದಿ ಸವಾರರಿಗೆ ಹೆಲ್ಮೆಟ್‌ನಿಂದ ವಿನಾಯಿತಿ ಘೋಷಿಸಿರುವ ಕ್ರಮ ವಿರುದ್ಧದ ಎಚ್ಚರಿಕೆ ಗಂಟೆಯೂ ಆಗಿದೆ.

ಗುಜರಾತ್‌ನಲ್ಲಿ ಕಳೆದ ವರ್ಷ 958 ಮಂದಿ ಹೆಲ್ಮೆಟ್‌ ರಹಿತ ದ್ವಿಚಕ್ರ ವಾಹನ ಸವಾರರು ಮತ್ತು 560 ಮಂದಿ ಹಿಂಬದಿ ಸವಾರರು ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಜಾರ್ಖಂಡ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಂಡ ಹೆಲ್ಮೆಟ್‌ ರಹಿತ ಸವಾರರು ಹಾಗೂ ಹಿಂಬದಿ ಸವಾರರ ಸಂಖ್ಯೆ ಕ್ರಮವಾಗಿ 790 ಮತ್ತು 450 ಆಗಿದೆ.

ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯವಲ್ಲ ಎಂದು ಕಳೆದ ವಾರ ಎರಡೂ ರಾಜ್ಯಗಳು ಘೋಷಿಸಿದ್ದವು. ಇಡೀ ದೇಶದಲ್ಲಿ ಗರಿಷ್ಠ ಹೆಲ್ಮೆಟ್‌ ರಹಿತ ಸವಾರರು ಬಲಿಯಾದದ್ದು ಉತ್ತರ ಪ್ರದೇಶದಲ್ಲಿ; 2018ರಲ್ಲಿ ಉತ್ತರ ಪ್ರದೇಶದಲ್ಲಿ 6020 ಮಂದಿ ಹಾಗೂ ಮಹಾರಾಷ್ಟ್ರದಲ್ಲಿ 5232 ಮಂದಿ ಹೆಲ್ಮೆಟ್ ರಹಿತ ಸವಾರರು ಅಪಘಾತಗಳಿಗೆ ಬಲಿಯಾಗಿದ್ದಾರೆ. 5048 ಹೆಲ್ಮೆಟ್ ರಹಿತ ಸವಾರರು ಮೃತಪಟ್ಟಿರುವ ತಮಿಳುನಾಡು, ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇತ್ತೀಚೆಗೆ ಜಾರಿಗೆ ಬಂದಿರುವ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ- 2019ರ ಅನ್ವಯ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ. ಸಿಕ್ಖರಿಗೆ ಮಾತ್ರ ಇದರಿಂದ ವಿನಾಯಿತಿ ಇದೆ. 5 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿದ್ದರೂ, ಸಾಕಷ್ಟು ಸಂಖ್ಯೆಯ ಹೆಲ್ಮೆಟ್ ಉತ್ಪಾದನೆಯಾದ ಬಳಿಕ ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News