ಮಂಗಳೂರು: ವಿಮಾನ ಪ್ರಯಾಣ ದರ ಹೆಚ್ಚಳ, ಕಿರುಕುಳ ಆರೋಪ; ಕೇರಳ ಪ್ರವಾಸಿ ಸಂಘಂ ಪ್ರತಿಭಟನೆ

Update: 2019-09-17 11:26 GMT

ಮಂಗಳೂರು, ಸೆ.17: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಬ್ಬಗಳ ಸಂದರ್ಭ ವಿಮಾನ ಪ್ರಯಾಣ ದರ ಏರಿಕೆ ಹಾಗೂ ಕೇರಳ ಮೂಲದ ಪ್ರಯಾಣಿಕರನ್ನು ತಪಾಸಣೆ ಹೆಸರಲ್ಲಿ ಕಿರುಕುಳ ನೀಡುತ್ತಿರುದ್ದಾರೆ ಎಂದು ಆರೋಪಿಸಿ ಕೇರಳ ಪ್ರವಾಸಿ ಸಂಘಂ ಕಾಸರಗೋಡು ಜಿಲ್ಲಾ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ವಿಮಾನಯಾನ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಹಬ್ಬಗಳ ಸಂದರ್ಭ ವಿಪರೀತವೆನ್ನುವಷ್ಟು ನಾಲ್ಕು-ಐದು ಪಟ್ಟು ಪ್ರಯಾಣ ದರ ಏರಿಕೆ ಮಾಡುತ್ತಿವೆ. ಸರಕಾರಿ ಸಂಸ್ಥೆಯಾದ ಏರ್ ಇಂಡಿಯಾ ಕೂಡ ಇದಕ್ಕೆ ಹೊರತಾಗಿಲ್ಲ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ವರ್ಷಾನುಗಟ್ಟಲೇ ಚರ್ಚೆ ನಡೆಯುತ್ತಿದೆ ಎಂದರು.

ಈ ಮೊದಲು ಕೇರಳ ಪ್ರವಾಸಿ ಸಂಘಂ ಕೂಡ ವಿಮಾನ ನಿಲ್ದಾಣದವರೆಗೆ ಮಾರ್ಚ್ ಹಮ್ಮಿಕೊಂಡಿತ್ತು. ಡಿವೈಎಫ್‌ಐ ಕೂಡ ವಿಮಾನ ನಿಲ್ದಾಣದ ಮುಂಭಾಗ ಕಿರುಕುಳದ ವಿರುದ್ಧ ಧ್ವನಿ ಎತ್ತುವ ಪ್ರಯತ್ನ ಮಾಡಿತ್ತು. ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ಪ್ರಯಾಣಿಕರು ತಮಗಾದ ಅನ್ಯಾಯ, ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವು ಬಾರಿ ಪ್ರತಿಭಟನೆ, ಪ್ರತಿರೋಧ ವ್ಯಕ್ತಪಡಿಸಿದರೂ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಕಸ್ಟಮ್ಸ್ ಅಧಿಕಾರಿಗಳು ತಮ್ಮ ವರ್ತನೆ ಬದಲಿಸದಿರುವುದು ಖೇದಕರ ಎಂದು ಅವರು ಹೇಳಿದರು.

ಕೇರಳದಿಂದ ಬರುವವರು ಹೊರರಾಜ್ಯದವರು ಎನ್ನುವ ಅಸಹನೆ ಕಂಡುಬರುತ್ತಿದೆ. ಮುಸ್ಲಿಮರಿದ್ದರಂತೂ ಅವರನ್ನು ತಪಾಸಣೆ ಹೆಸರಲ್ಲಿ ವಿಪರೀತ ಎನ್ನುವಷ್ಟು ಕಿರಕುಳ ನೀಡುತ್ತಿದ್ದಾರೆ. ಇನ್ನು ಮಲಯಾಳಿಗಳನ್ನು ಕಳ್ಳತನದಿಂದ ಚಿನ್ನ ಸಾಗಾಟ ಮಾಡುವವರು ಎನ್ನುವ ರೀತಿಯಲ್ಲಿ ಕಾಣಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ಸಂಘಟನೆಯಿಂದ ಬಲವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.

ಕಣ್ಣೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆರಂಭವಾಗಿದ್ದರೂ ಕಾಸರಗೋಡು, ಮಲಬಾರ್ ಜಿಲ್ಲೆಗಳಿಂದಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಲಾಭ ಹರಿದುಬರುತ್ತಿದೆ. ಕಾಸರಗೋಡಿನವರಿಗೆ ಕರ್ನಾಟಕದೊಂದಿಗೆ ಅತ್ಯಂತ ಭಾವನಾತ್ಮಕ ಸಂಬಂಧವಿದೆ. ನಾವು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎನ್ನುವುದನ್ನು ಮರೆಯಬಾರದು ಎಂದರು.

ಕಾಸರಗೋಡಿನವರ ಗಡಿ ಬೇರೆ ಇದೆ ಎನ್ನುವ ಕಾರಣದಿಂದ ಅವರನ್ನು ತುಚ್ಚವಾಗಿ ಕಾಣಲಾಗುತ್ತಿದೆ. ಇಂತಹ ಮಲತಾಯಿ ಧೋರಣೆಯನ್ನು ಒಪ್ಪಿಕೊಳ್ಳಲು ಅಸಾಧ್ಯ. ನಾವು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಕೇರಳದವರು ಎಲ್ಲ ತೆರಿಗೆ ಪಾವತಿಸಿಯೇ ಪ್ರಯಾಣ ಮಾಡುತ್ತಾರೆ. ತಾರತಮ್ಯ ಮುಂದುವರಿದರೆ ಇದನ್ನು ಜಿಲ್ಲೆಯ ಜನತೆಯೂ ವಿರೋಧಿಸಲಿದೆ ಎಂದು ತಿಳಿಸಿದರು.

ಪ್ರತಿಭಟನಾ ಸಭೆಯಲ್ಲಿ ಕೇರಳ ಪ್ರವಾಸಿ ಸಂಘಂ ರಾಜ್ಯ ಉಪಾಧ್ಯಕ್ಷ ಪಿ.ಕೆ. ಅಬ್ದುಲ್ಲಾ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಕೇರಳ ಪ್ರವಾಸಿ ಸಂಘಂ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಜಲೀಲ್ ಪಿ.ಕೆ. ಕಪೀಲ್, ಕಾರ್ಯದರ್ಶಿ ನಾರಾಯಣನ್ ಒ., ಖಜಾಂಚಿ ಸುಧಾಕರನ್, ರಾಜ್ಯ ಸಮಿತಿ ಸದಸ್ಯ ರಾಜೇಂದ್ರ, ಬಿ.ಬಿ.ಕೃಷ್ಣನ್, ಗಿರೀಶ್, ವಾಸು, ಅಶ್ರಫ್ ಮತ್ತಿತರರು ಪಾಲ್ಗೊಂಡಿದ್ದರು.

‘ವಿಮಾನ ನಿಲ್ದಾಣದಲ್ಲೇ ಕಳ್ಳರಿದ್ದಾರೆ’

ನಿಲ್ದಾಣದಲ್ಲಿ ಚಿನ್ನ ಕಳವು ಸೇರಿದಂತೆ ಆರೋಪಿಗಳನ್ನು ವಿಚಾರಣೆ ನಡೆಸುವ ಹಕ್ಕು ವಿಮಾನ ನಿಲ್ದಾಣ ಅಧಿಕಾರಿಗಳಿಗಿದೆ. ಎಲ್ಲ ಪ್ರಯಾಣಿಕರನ್ನು ಅಪರಾಧಿ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಕಸ್ಟಮ್ಸ್ ಅಧಿಕಾರಿಗಳಲ್ಲಿಯೇ ಕಳ್ಳರಿದ್ದಾರೆ. ಭ್ರಷ್ಟಾಚಾರ ಇಲ್ಲೂ ಬೇರೂರಿರುವುದು ಸರ್ವವ್ಯಾಪಿ. ಒಂದು ಧರ್ಮ, ಒಂದು ರಾಜ್ಯದವರನ್ನು ಗುರಿಯಾಗಿರಿಸಿಕೊಳ್ಳುವುದು ಸಲ್ಲದು. ಅಧಿಕಾರಿಗಳು ಪೂರ್ವಗ್ರಹಪೀಡಿತ ಭಾವನೆ ಬದಲಿಸಿಕೊಳ್ಳಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

ವಿಮಾನ ಸಂಸ್ಥೆಗಳ ಸುಲಿಗೆ ದಂಧೆ: ಆರೋಪ

ಸಾಮಾನ್ಯ ದಿನಗಳಲ್ಲಿ ದುಬೈ, ಸೌದಿ ಅರೆಬಿಯಾಗೆ 10 ಸಾವಿರ ರೂ. ಪ್ರಯಾಣ ದರ ಇದ್ದರೆ, ಹಬ್ಬದ ಸಂದರ್ಭ 50 ಸಾವಿರ ರೂ.ವರೆಗೂ ಹೆಚ್ಚಳ ಮಾಡಲಾಗುತ್ತಿದೆ. ವಿಶೇಷ ಸಂದರ್ಭ ವಿದೇಶದಿಂದ ವಾಪಸಾಗುವವರಿಗೆ ಹೆಚ್ಚಿನ ಪ್ರಯಾಣ ದರ ಬಿಸಿತುಪ್ಪವಾಗಿ ಪರಿಣಮಿಸಿದೆ. ವಿದೇಶಕ್ಕೆ ತೆರಳುವಾಗಲೂ ಇಂತಹದ್ದೇ ದರದಿಂದ ತ್ರಿಶಂಕು ಸ್ಥಿತಿಯಲ್ಲಿ ಸಿಲುಕುತ್ತಿದ್ದಾರೆ. ಕೇರಳದವರು ಶಾಪಿಂಗ್ ಮಾಡಲು ವಿದೇಶಕ್ಕೆ ತೆರಳುತ್ತಿಲ್ಲ. ಹೊಟ್ಟೆಪಾಡಿಗಾಗಿ, ತಮ್ಮ ಕುಟುಂಬದ ನಿರ್ವಹಣೆಗಾಗಿ ದುಡಿಯುತ್ತಿದ್ದಾರೆ. ಯೌವನವನ್ನೇ ದುಡಿಮೆಗೆ ಮುಡಿಪಾಗಿಡುತ್ತಿದ್ದಾರೆ. ದುಡಿಯುವವರ ಹೊಟ್ಟೆಗೆ ಹೊಡೆಯುವುದು ನ್ಯಾಯವಲ್ಲ. ವಿಮಾನ ಸಂಸ್ಥೆಗಳ ಈ ಕ್ರಮವು ಸುಲಿಗೆ ದಂಧೆಯಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News