​ಸೆ.19: ಕಟ್ಟಡ ಕಾರ್ಮಿಕರಿಂದ ‘ಬೆಂಗಳೂರು ಚಲೋ’ ಕಾರ್ಯಕ್ರಮ

Update: 2019-09-17 11:46 GMT

ಮಂಗಳೂರು,ಸೆ.17: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ವತಿಯಿಂದ ಸೆ.19ರಂದು ‘ಬೆಂಗಳೂರು ಚಲೋ’ ಕಾರ್ಯಕ್ರಮ ನಡೆಯಲಿದ್ದು, ದ.ಕ.ಜಿಲ್ಲೆಯಿಂದ ಸುಮಾರು 500ಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಫೆಡರೇಶನ್‌ನ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರದ ಉದ್ದೇಶಿತ ಸಾಮಾಜಿಕ ಸುರಕ್ಷಾ (ಸಂಹಿತೆ) ಕಲ್ಯಾಣ ಮಸೂದೆ-2018ನ್ನು ಕೈಬಿಡಲು ಆಗ್ರಹಿಸಿ ಹಾಗೂ ಕಟ್ಟಡ ಕಾರ್ಮಿಕ ಕಾನೂನು - 1996 ಹಾಗೂ ಸೆಸ್ ಕಾನೂನು ಮತ್ತು ಕಟ್ಟಡ ಕಾರ್ಮಿಕ ಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸಲು ಒತ್ತಾಯಿಸಿ ’ಬೆಂಗಳೂರು ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈಗಾಗಲೇ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ನೀತಿಗಳನ್ನು ಜಾರಿಗೊಳಿಸಿ ಕೋಟ್ಯಂತರ ಕಟ್ಟಡ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕರ ಇದೀಗ ಸಾಮಾಜಿಕ ಸುರಕ್ಷತಾ ಮಸೂದೆ-2018ನ್ನು ಜಾರಿಗೊಳಿಸಲು ಹೊರಟಿದೆ. ಇದರಿಂದ 4 ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರು ಈಗ ಪಡೆಯುತ್ತಿರುವ ಹಲವು ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಸುನೀಲ್ ಕುಮಾರ್ ಬಜಾಲ್ ತಿಳಿಸಿದರು.

ಕೇಂದ್ರ ಸರಕಾರ ಸಂಸತ್ತಿನಲ್ಲಿ ಪಾಸು ಮಾಡಿರುವ ಈ ಕಾನೂನು ಜಾರಿಯಾದರೆ 1996ರಲ್ಲಿ ಜಾರಿಯಾದ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನುಗಳು ರದ್ದಾಗುತ್ತವೆ. ನೋಂದಣಿಯಾಗಿರುವ ದೇಶದ 4 ಕೋಟಿಯ ಪೈಕಿ ಕರ್ನಾಟಕದ 20 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಗಳು ಕೂಡ ರದ್ದಾಗಲಿದೆ. ಕರ್ನಾಟಕದ ಕಲ್ಯಾಣ ಮಂಡಳಿಯಲ್ಲಿ ತಮ್ಮ ಹೆಸರು ನೋಂದಾಯಿಸಿ ಸುಮಾರು 6 ಲಕ್ಷ ಜನರು ವಿವಿಧ ಕಲ್ಯಾಣ ಸೌಲಭ್ಯಗಳಿಗೆ ಅರ್ಜಿ ಹಾಕಿದ್ದಾರೆ. ಈ ಹೊಸ ಕಾನೂನು ಜಾರಿಯಾದರೆ ಮದುವೆ, ಪಿಂಚಣಿ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನಗಳ ಸಹಿತ 14 ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದರು.

ಹೊಸದಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ‘ಸಲಹಾ ಮಂಡಳಿ’ಗಳು ರಚನೆಯಾಗುತ್ತವೆ ಮತ್ತು ಅವುಗಳು ಹಿಂದಿನಂತೆ ಯಾವುದೇ ತೀರ್ಮಾನ ಕೈಗೊಳ್ಳುವ ಮಂಡಳಿಗಳಾಗುವುದಿಲ್ಲ. ಅಲ್ಲದೆ ಫಲಾನುಭವಿಗಳು ಮಂಡಳಿಯ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಹೊಸ ರಾಜ್ಯ ಕಲ್ಯಾಣ ಮಂಡಳಿಯಲ್ಲಿ ಈಗಿನಂತೆ ನೋಂದಣಿ ಕಡ್ಡಾಯಲ್ಲ. ಕಾರ್ಮಿಕರು 14ನೇ ವಯಸ್ಸಿನಿಂದ ನೋಂದಣಿ ಮಾಡಬಹುದು. ಇದರಿಂದ ಬಾಲ ಕಾರ್ಮಿಕ ಪದ್ಧತಿಗೆ ಉತ್ತೇಜನ ನೀಡುತ್ತದೆ ಎಂದು ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.

ಹೀಗಾಗಿ ರಾಜ್ಯದಲ್ಲಿ ಸಂಗ್ರಹವಾಗಿರುವ 8 ಸಾವಿರ ಕೋಟಿ ಸೆಸ್ ಸಹಿತ ದೇಶದ 70 ಸಾವಿರ ಕೋ.ರೂ. ಹಾಗೂ ಇಡೀ ದೇಶದ ಧ ಕಲ್ಯಾಣ ಮಂಡಳಿಯಲ್ಲಿ ಶೇಖರಣೆಯಾಗಿರುವ ಸುಮಾರು 70 ಸಾರ ಕೋಟಿ ಹಣ ಕೇಂದ್ರ ಸರಕಾರದ ಕೈ ವಶವಾಗಲಿದೆ. ಅಲ್ಲದೆ ಕಾರ್ಮಿಕರ ನೋಂದಣಿ, ನವೀಕರಣ ಹಾಗೂ ಸೌಲಭ್ಯಗಳ ವಿತರಣೆಯನ್ನು ಖಾಸಗಿಯವರ ಕೈಗೆ ವಹಿಸಿ ಅವರಿಗೆ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ಹಣವನ್ನು ಧಾರೆ ಎರೆಯಲು ಕೇಂದ್ರ ಸರಕಾರ ನಡೆಸುತ್ತಿರುವ ಹುನ್ನಾರ ಇದಾಗಿದೆ ಎಂದು ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಕಟ್ಟಡ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಜನಾರ್ದನ ಕುತ್ತಾರ್, ಸಿಐಟಿಯು ಮಂಗಳೂರು ನಗರ ಕೋಶಾಧಿಕಾರಿ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News