​ಕಾವೂರು ಉಲ್ಲಾಸನಗರ: ಕುರುಬ ಕುಟುಂಬದ ಮನೆ ನೆಲಸಮ; ದಸಂಸ ಆರೋಪ

Update: 2019-09-17 12:06 GMT

ಮಂಗಳೂರು, ಸೆ.17: ಕಾವೂರು ಉಲ್ಲಾಸನಗರ ಪ್ರಥಮ ಕ್ರಾಸ್ ಬಳಿ ಸ.ನಂ. 90/2ರ ಸರಕಾರಿ ಜಮೀನಿನಲ್ಲಿ ಕಳೆದ 20 ವರ್ಷಗಳಿಂದ ಸಣ್ಣ ಗುಡಿಸಲು ಕಟ್ಟಿ ವಾಸ ಮಾಡುತ್ತಿರುವ ಬಡ ಕುರುಬ ಸಮುದಾಯದ ಕುಟುಂಬವೊಂದರ ಹೊಸ ಮನೆಯಲ್ಲಿ ಸರಕಾರಿ ಅಧಿಕಾರಿಗಳು ನೆಲಸಮ ಮಾಡಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದ.ಕ. ಜಿಲ್ಲಾ ಶಾಖೆಯ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ ಆರೋಪಿಸಿದ್ದಾರೆ.

ಸುರತ್ಕಲ್ ಕಂದಾಯ ನಿರೀಕ್ಷಕ ನವೀನ್ ಮತ್ತಿತರರ ಅಧಿಕಾರಿಗಳ ತಂಡ ಮನೆಯ ಯಜಮಾನಿ ಶಿವಮ್ಮರಿಗೆ ಯಾವುದೇ ನೋಟಿಸ್ ಜಾರಿ ಮಾಡದೆ ಏಕಾಎಕಿ ಮುಂಜಾನೆ ಮನೆ ಖಾಲಿ ಮಾಡಲು ಮೌಖಿಕವಾಗಿ ಹೇಳಿ ಸಂಜೆಯ ವೇಳೆಗೆ ಜೆಸಿಬಿ ಬಳಸಿ ಮನೆಯನ್ನು ಧ್ವಂಸಗೊಳಿಸಿ 2 ಲಕ್ಷ ರೂ. ನಷ್ಟವನ್ನುಂಟು ಮಾಡಿದ್ದಾರೆ ಎಂದು ಜಗದೀಶ್ ಪಾಂಡೇಶ್ವರ ಆರೋಪಿಸಿದ್ದಾರೆ.

ಶಿವಮ್ಮ ಅವರು 20 ವರ್ಷದ ಹಳೆಯ ಗುಡಿಸಲನ್ನು ಕೆಡವಿ ಇತ್ತೀಚೆಗೆ ಹೊಸ ಮನೆ ನಿರ್ಮಿಸಿದ್ದರು. ಇದೀಗ ಅದೇ ಮನೆಯನ್ನು ಧ್ವಂಸ ಮಾಡಿದ್ದಾರೆ. ಫಲಕೊಡುವ ತೆಂಗಿನ ಮರ, ಬಾಳೆಗಿಡವನ್ನು ಧ್ವಂಸ ಮಾಡಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News