'ಗಿರಿಗಿಟ್' ಸಿನೆಮಾ ವಿವಾದ ಸುಖಾಂತ್ಯ: ದಾವೆ ಹಿಂಪಡೆಯಲು ವಕೀಲರ ಸಂಘ ನಿರ್ಧಾರ

Update: 2019-09-17 12:28 GMT

ಮಂಗಳೂರು, ಸೆ.17: 'ಗಿರಿಗಿಟ್' ತುಳು ಸಿನೆಮಾದಲ್ಲಿ ವಕೀಲರು ಮತ್ತು ನ್ಯಾಯಾಂಗ ಬಗ್ಗೆ ತಪ್ಪು ಮಾಹಿತಿ ನೀಡುವ ದೃಶ್ಯಗಳಿವೆ ಎಂದು ಆರೋಪಿಸಿ ವಕೀಲರ ಸಂಘ ಮಂಗಳೂರಿನ ನ್ಯಾಯಾಲಯದಲ್ಲಿ ಹೂಡಿರುವ ದಾವೆ ಹಿಂಪಡೆಯಲು ನಿರ್ಧರಿಸಿದೆ. ಈ ಮೂಲಕ ಗಿರಿಗಿಟ್ ಸಿನೆಮಾಕ್ಕೆ ತಡೆಯಾಜ್ಞೆ ವಿವಾದ ಬಗೆಹರಿದಿದೆ ಎಂದು ಮಂಗಳೂರು ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ. ಮತ್ತು ಗಿರಿಗಿಟ್ ಸಿನೆಮಾ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.

ಕಾನೂನಿನ ಅರಿವಿನ ಕೊರತೆಯಿಂದ ಚಿತ್ರದಲ್ಲಿ ತಪ್ಪಾಗಿದೆ ಎಂದು ಗಿರಿಗಿಟ್ ಚಿತ್ರತಂಡ ಕ್ಷಮೆ ಯಾಚಿಸಿದೆ. ಆಕ್ಷೇಪಾರ್ಹವಾದ ಸಂಭಾಷಣೆ ಮ್ಯೂಟ್ ಮಾಡಲು, ದೃಶ್ಯಗಳನ್ನು ತೆಗೆದುಹಾಕಲು ಚಿತ್ರತಂಡ ಒಪ್ಪಿಕೊಂಡಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಲಾಗಿದೆ. ಈ ಪ್ರಮಾಣಪತ್ರದ ಅನ್ವಯ ನಿಗದಿತ ಕಾಲಾವಕಾಶದ ಒಳಗೆ ಚಿತ್ರತಂಡ ಷರತ್ತುಗಳನ್ನು ಪೂರೈಸಿದ ಬಳಿಕ ವಕೀಲರ ಸಂಘ ದಾವೆ ಹಿಂಪಡೆಯಲಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎಂದು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮಂಗಳೂರು ವಕೀಲರ ಸಂಘ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. ಗಿರಿಗಿಟ್ ಚಿತ್ರತಂಡಕ್ಕೆ ಯಾವುದೇ ಹಾನಿ ಉಂಟುಮಾಡುವ ಉದ್ದೇಶ ನಮಗಿಲ್ಲ. ಮುಂದಿನ ದಿನಗಳಲ್ಲಿ ವಕೀಲರು ಮತ್ತು ನ್ಯಾಯಾಂಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದರೆ ಮಂಗಳೂರು ವಕೀಲರ ಸಂಘ ಗಂಭೀರವಾಗಿ ಪರಿಗಣಿಸಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ವಕೀಲ ಎಂ.ಪಿ. ಶೆಣೈ, ಗಿರಿಗಿಟ್ ಚಿತ್ರತಂಡದ ಮಂಜುನಾಥ ಅತ್ತಾವರ ಉಪಸ್ಥಿತರಿದ್ದರು.

ಆಕ್ಷೇಪಾರ್ಹ ಸಂಭಾಷಣೆ ಸ್ತಬ್ಧ
'ಗಿರಿಗಿಟ್' ಸಿನೆಮಾ ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡಿ, ಚಿತ್ರದ ದೃಶ್ಯಗಳನ್ನು ತೆಗೆದುಹಾಕಲು ಸೆನ್ಸಾರ್ ಮಂಡಳಿ ಅನುಮತಿ ಪಡೆಯಬೇಕಿದೆ. ಇದು ದೀರ್ಘಾವಧಿ ಪ್ರಕ್ರಿಯೆ. ಮುಂದಿನ ಮೂರು ದಿನಗಳೊಳಗೆ ಆಕ್ಷೇಪಾರ್ಹ ಎಂದು ಆರೋಪಿಸಲಾದ ಸಂಭಾಷಣೆಗಳನ್ನು ಮ್ಯೂಟ್ ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ವಕೀಲರ ಸಂಘಕ್ಕೆ ಮನವರಿಕೆ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಕೀಲರ ಬಗ್ಗೆ ಯಾರೂ ಕೀಳಾಗಿ ಪೋಸ್ಟ್ ಮಾಡಬಾರದು ಎಂದರು.

ಅವಹೇಳನಕಾರಿ ಪೋಸ್ಟ್ ವಿರುದ್ಧ ಕ್ರಮ
'ಗಿರಿಗಿಟ್' ಚಿತ್ರ ಮತ್ತು ವಕೀಲರ ಸಂಘದ ನಡುವಿನ ವಿವಾದಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಎರಡು ಫೇಸ್‌ಬುಕ್ ಖಾತೆಗಳ ಅಡ್ಮಿನ್ ವಿರುದ್ದವೂ ದೂರು ದಾಖಲಾಗಿದೆ. ದುರುದ್ದೇಶದಿಂದ ಕೇಸ್ ಹಾಕಿಲ್ಲಘ. ವಕೀಲರ ಭಾವನೆಗಳಿಗೆ ಧಕ್ಕೆಯಾದ ಕಾರಣ ಪ್ರಕರಣ ದಾಖಲಿಸಲಾಗಿದೆ ಎಂದು ರಾಘವೇಂದ್ರ ಎಚ್.ವಿ. ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News