ಜೇಸಿ ಸಪ್ತಾಹದ ಸಮಾರೋಪ ಸಮಾರಂಭ

Update: 2019-09-17 12:34 GMT

ಉಪ್ಪಿನಂಗಡಿ: ಜೇಸಿಐಯು ವ್ಯಕ್ತಿತ್ವ ವಿಕಸನ ಮಾಡುವುದರೊಂದಿಗೆ, ಯುವಶಕ್ತಿಯಲ್ಲಿ ಸಮರ್ಥ ನಾಯಕತ್ವ ಗುಣವನ್ನು ತುಂಬಿಸಿ ಅವರಿಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವ ಕೆಲಸ ಜೇಸಿಐ ಮಾಡುತ್ತಿದೆ ಎಂದು ರಂಗ ಕಲಾವಿದ ಸುಂದರ್ ರೈ ಮಂದಾರ ತಿಳಿಸಿದರು.

34 ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ನಡೆದ ಜೇಸಿಐ ನೆಕ್ಕಿಲಾಡಿ ಘಟಕದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಪ್ತಾಹದಂಗವಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.

ಜೇಸಿ ತತ್ವವು ಎಲ್ಲರನ್ನೂ ಸಮಾನತೆಯೆಡೆ ಕೊಂಡೊಯ್ಯುತ್ತಿದ್ದು, ಉತ್ತಮ ಮಾರ್ಗದರ್ಶನದ ಮೂಲಕ ಸಮಾಜದಲ್ಲಿ ಉತ್ತಮ ಹಾದಿಯಲ್ಲಿ ಮುನ್ನಡೆಯುವಂತೆ ಮಾಡುತ್ತದೆ. ಇದರೊಂದಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಲು ಪ್ರೇರೆಪಿಸುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜೇಸಿಐ ಭಾರತದ ರಾಷ್ಟ್ರೀಯ ನಿರ್ದೇಶಕ ಸಂದೀಪ್ ಕುಮಾರ್ ಮಾತನಾಡಿ, ಜೇಸಿಐಯಿಂದಾಗಿ ನಮ್ಮಲ್ಲಿ ಆತ್ಮವಿಶ್ವಾಸ ಮೂಡಲು ಸಾಧ್ಯ. ಈ ಬಾರಿ ನೆಕ್ಕಿಲಾಡಿ ಜೇಸಿಐ ಘಟಕವು ಉತ್ತಮ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ಅರ್ಪಣಾ ಭಾವದಿಂದ ತೊಡಗಿಸಿಕೊಂಡಿದೆ ಎಂದರು.

ವಲಯ 15ರ ತರಬೇತಿ ವಿಭಾಗದ ನಿರ್ದೇಶಕಿ ಅಕ್ಷತಾ ಗಿರೀಶ್ ಮಾತನಾಡಿ, ಯುವ ಜನಾಂಗದಲ್ಲಿ ಅಭಿವೃದ್ಧಿಯ ಅವಕಾಶಗಳನ್ನು ಜೇಸಿಐ ಕಲ್ಪಿಸುತ್ತಿದ್ದು, ಗುರಿಗಳು ಅತ್ಯುತ್ತಮವಿರಬೇಕೆಂಬುದನ್ನು ಕಲಿಸುತ್ತದೆ. ಇದರಿಂದ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವೈಜ್ಞಾನಿಕ ಸಂಶೋಧನೆಗಾಗಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ಅಮನ್ ಕೆ.ಎ., ರಂಗ ಕಲಾವಿದೆ ಕುಮಾರಿ ಜ್ಯೋತಿ ಕುಲಾಲ್ ಹಾಗೂ ಪ್ರಾಂತ್ಯ ಎಫ್ 15ರ ವಲಯ ಉಪಾಧ್ಯಕ್ಷ ದಾಮೋದರ ಪಾಟಾಳಿ, ಆಡಳಿತ ವಿಭಾಗದ ನಿರ್ದೇಶಕ ಪ್ರಶಾಂತ್ ಕುಮಾರ್ ರೈ ದಂಪತಿಯನ್ನು ಸನ್ಮಾನಿಸಲಾಯಿತು. ಗ್ರಾ.ಪಂ. ಸದಸ್ಯೆ, ಜೇಸಿ ಸಪ್ತಾಹ ಮಹಾ ನಿರ್ದೇಶಕಿ ಅನಿ ಮಿನೇಜಸ್ ಅವರನ್ನು ಗೌರವಿಸಲಾಯಿತು.

 ವೇದಿಕೆಯಲ್ಲಿ ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎನ್. ಗೋಪಾಲ್ ಹೆಗ್ಡೆ, ಜೇಸಿಐ ನೆಕ್ಕಿಲಾಡಿ ಸ್ಥಾಪಕಾಧ್ಯಕ್ಷ ಶಿವಕುಮಾರ್ ಬಾರಿತ್ತಾಯ, ಸಪ್ತಾಹ ನಿರ್ದೇಶಕ ಗೌತಮ್ ಕೆ.ಎಸ್. ಉಪಸ್ಥಿತರಿದ್ದರು.

ಜೇಸಿಐ ನೆಕ್ಕಿಲಾಡಿಯ ನಿಕಟ ಪೂರ್ವಾಧ್ಯಕ್ಷೆ ಅಮಿತಾ ಹರೀಶ್ ಜೇಸಿ ವಾಣಿ ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ ಜೇಸಿಐ ಅಧ್ಯಕ್ಷ ವಿನೀತ್ ಶಗ್ರಿತ್ತಾಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರಮೇಶ್ ಸುಭಾಶ್‌ನಗರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News