ಈಶ್ವರಪ್ಪ ಹೊಲಸು ಬಾಯಿಯ ರಾಜಕಾರಣಿ: ಶಾಹುಲ್ ಹಮೀದ್

Update: 2019-09-17 12:54 GMT

ಮಂಗಳೂರು, ಸೆ. 17: ಸಚಿವ ಈಶ್ವರಪ್ಪ ಪರಮ ಭ್ರಷ್ಟ ಎಂಬುದು ತಿಳಿದಿತ್ತು. ಅದರೆ ಇದೀಗ ಮುಸ್ಲಿಂ ಸಮುದಾಯದ ಬಗ್ಗೆ ಅವಮಾನಿಸುವ ಅವರ ಹೇಳಿಕೆಗಳು ಅವರು ಹೊಲಸು, ಕೊಳಕು ಬಾಯಿಯ ರಾಜಕಾರಣಿ ಎಂಬುದನ್ನು ಸಾಬೀತು ಪಡಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ನ ಅಲ್ಪಸಂಖ್ಯಾತ ಮುಖಂಡ, ಜಿಪಂ ಸದಸ್ಯ ಶಾಹುಲ್ ಹಮೀದ್ ಆರೋಪಿಸಿದ್ದಾರೆ.

ಜಿಲ್ಲಾ ಮುಸ್ಲಿಂ ಮುಖಂಡರ ಜತೆ ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಈಶ್ವರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರನ್ನು ಹುಚ್ಚಾಸ್ಪತ್ರೆಗೆ ದಾಖಲಿಸಬೇಕು. ಶ್ರೀರಾಮ ಸೇನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೊಲೆ ಸುಲಿಗೆ ಮಾಡಿದ ರೌಡಿಶೀಟರ್‌ಗಳ ಮಧ್ಯೆ ಕುಳಿತು ಅವರು ಸಮುದಾಯದ ವಿರುದ್ದ ಮಾತನಾಡಿದ್ದಾರೆ. ಇದನ್ನು ಅಲ್ಪಸಂಖ್ಯಾತರು ಖಂಡಿಸುವುದಾಗಿ ಹೇಳಿದರು.

ರಾಜ್ಯದ ಲ್ಲಿ ಬಿಜೆಪಿಗೆ ಶೇ. 36 ಮಂದಿ ಮತ ಹಾಕಿದ್ದಾರೆ. ಹಾಗಿದ್ದರೆ ಉಳಿದ ಶೇ. 64 ಮಂದಿ ದೇಶದ್ರೋಹಿಗಳೇ ಎಂದು ಅವರು ಹೇಳಬೇಕು. ಈಶ್ವರಪ್ಪನವರ ಮನೆಯಲ್ಲಿ ನೋಟು ಎಣಿಸುವ ಯಂತ್ರ ಪತ್ತೆಯಾಗಿತ್ತು. ಈಗ ಅವರಿಗೆ ಪಾಪ ಕ್ರತ್ಯಗಳನ್ನು ಎಣಿಸುವ ಯಂತ್ರದ ಅಗತ್ಯವಿದೆ ಎಂದು ಅವರು ಮೂದಲಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಆಗಲಿ, ಸಿಟಿ ರವಿ ಆಗಲಿ ಈ ರೀತಿ ಮಾತನಾಡುವುದಿಲ್ಲ. ರಾಜಕೀಯ ಬದುಕು ಶಾಶ್ವತವಲ್ಲ. ಇದ್ದಷ್ಟು ಸಮಯ ಸೌಹಾರ್ದದಿಂದ ಬದುಕುವುದನ್ನು ಕಲಿಯಬೇಕು. ಮುಸ್ಲಿಂ ಸಮುದಾಯಕ್ಕೆ ಬೈದರೆ ಪ್ರಮೋಶನ್ ಸಿಗದು. ಅಂತಹ ಕನಸು ಕಾಣುವುದು ಬೇಡ. ನಮಗೂ ಮಾತನಾಡಲು ಗೊತ್ತಿದೆ. ಆದರೆ ಕಾಂಗ್ರೆಸ್ಸಿಗರು ಶಾಂತಿ ಪ್ರಿಯರು. ನಿಮ್ಮ ಮಟ್ಟಕ್ಕೆ ನಾವು ಇಳಿಯುವುದಿಲ್ಲ ಎಂದು ಶಾಹುಲ್ ಹಮೀದ್ ಹೇಳಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್ ಮಾತನಾಡಿ, ಸಮುದಾಯದ ವಿರುದ್ಧದ ಹೇಳಿಕೆಗಳು ಈಶ್ವರಪ್ಪನವರಿಂದ ಇದೇ ಮೊದಲಲ್ಲ. ಈ ಹಿಂದೆಯೂ ಕಚೇರಿ ಗುಡಿಸಿದ ಮುಸ್ಲಿಂ ಸಮುದಾಯದವರಿಗೆ ಮಾತ್ರ ಬಿಜೆಪಿ ಟಿಕೆಟ್ ಎಂದು ಹೇಳಿಕೆ ನೀಡಿದ್ದರು. ಅಂತಹ ಟಿಕೆಟ್ ನಮಗೆ ಬೇಕಾಗಿಲ್ಲ ಎಂದು ಹೇಳಿದರು.

ಬಿಜೆಪಿಗೆ ಮತ ಹಾಕದವರು ಪಾಕಿಸ್ತಾನ ಪರವಾಗಿರುವವರು ಅವರು ಹೇಳಿದ್ದಾರೆ. ಸಂವಿಧಾನ ಬದ್ದವಾಗಿ ಪ್ರತಿಜ್ಞೆ ಸ್ವೀಕರಿಸಿ, ಸಂವಿಧಾನದಲ್ಲಿ ನಂಬಿಕೆ ಇದ್ದಲ್ಲಿ ಖಂಡಿತಾ ಈ ಕೀಳು ಮಟ್ಟದ ಹೇಳಿಕೆ ನೀಡುತ್ತಿರಲಿಲ್ಲ. ನಮ್ಮನ್ನು ಯಾವ ರೀತಿಯಲ್ಲಿ ಮೂದಲಿಸಿದರೂ ನಾವು ಭಾರತೀಯರಾಗಿ, ದೇಶಭಕ್ತರಾಗಿಯೇ ಬದುಕುತ್ತೇವೆ. ದೇಶಪ್ರೇಮದ ಪಾಠ ನಾವು ಈಶ್ವರಪ್ಪರಿಂದ ಕಲಿಯಬೇಕಾಗಿಲ್ಲ. ಸಾವಿರ ಈಶ್ವರಪ್ಪ ಬಂದರೂ ನಾವು ಹೆದರುವುದಿಲ್ಲ. ಪಾಕಿಸ್ತಾನಕ್ಕೆ ಅವರು ಬೇಕಾದರೆ ಹೋಗಲಿ. ನವಾಝ್ ಶರೀಫ್ ಅವರ ಮಗಳ ಹುಟ್ಟುಹಬ್ಬಕ್ಕೆ ಆಮಂತ್ರಣವಿಲ್ಲದೆ ಹೋಗಿದ್ದು ಪ್ರಧಾನಿ ನರೇಂದ್ರ ಮೋದಿ. ಅವರ ಬಗ್ಗೆ ಈಶ್ವರಪ್ಪ ಮಾತನಾಡಲಿ. ಇದು ಎಚ್ಚರಿಕೆಯ ಮಾತು, ಇದೇ ರೀತಿ ಮುಂದುವರಿದರೆ, ಮುಂದೆ ಅವರು ಜಿಲ್ಲೆಗೆ ಆಗಮಿಸುವ ಸಂದರ್ಭ ಕಪ್ಪು ಬಾವುಟ ಹಿಡಿದು ಪ್ರತಿರೋಧ ಒಡ್ಡಲಾಗುವುದು. ಜಾತ್ಯತೀತ ಸಿದ್ಧಾಂತಕ್ಕೆ ನಾವು ಎಂದೂ ಬದ್ಧ ಎಂದರು.

ಗೋಷ್ಠಿಯಲ್ಲಿ ಜಿ.ಪಂ. ಸದಸ್ಯ ಯು.ಪಿ. ಇಬ್ರಾಹೀಂ, ಮಾಜಿ ಕಾರ್ಪೊರೇಟರ್ ಅಬ್ದುಲ್ ರವೂಫ್, ಎನ್‌ಎಸ್‌ಯುಐನ ಸವದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News