ಮದ್ಯವರ್ಜನ ಶಿಬಿದ ಮೂಲಕ 19,765 ಮಂದಿ ವ್ಯಸನಮುಕ್ತ: ಸತೀಶ್ ಶೆಟ್ಟಿ

Update: 2019-09-17 13:07 GMT

ಬಂಟ್ವಾಳ, ಸೆ. 17: ಜನಜಾಗೃತಿ ವೇದಿಕೆಯ ದ.ಕ.ಜಿಲ್ಲೆ ಹಾಗೂ ಶ್ರೀ.ಕ್ಷೇ.ಗ್ರಾ. ಯೋಜನೆಯ ಸಹಯೋಗದಲ್ಲಿ ಇದುವರೆಗೆ 292ಕ್ಕೂ ಹೆಚ್ಚು ಮದ್ಯವರ್ಜನ ಶಿಬಿರವನ್ನು ಆಯೋಜಿಸಿ 19,765 ಕ್ಕೂ ಅಧಿಕ ಮಂದಿಯನ್ನು ವ್ಯಸನಮುಕ್ತರನ್ನಾಗಿಸಿದೆ ಎಂದು ಶ್ರೀ.ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದ್ದಾರೆ.

ಬಂಟ್ವಾಳ ಎಸ್‍ಡಿಎಂ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಮತ್ತು ಎಲ್ಲ ತಾಲೂಕು ಪದಾಧಿಕಾರಿ ಸಭೆಯ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

8 ದಿನಗಳ ಕಾಲ ನಡೆಸುವ ಮದ್ಯವರ್ಜನಶಿಬಿರಗಳಲ್ಲಿ ಮದ್ಯವ್ಯಸನಿಗಳಿಗೆ ಮನಪರಿವರ್ತನೆಯ ಬೋಧನೆ ಮತ್ತು ಚಿಕಿತ್ಸೆಯ ಮೂಲಕ ವ್ಯಸನಮುಕ್ತರನ್ನಾಗಿಸಲಾಗುತ್ತದೆ. ಇಂತಹ ವ್ಯಸನಮುಕ್ತರು ಬಳಿಕ ನವಜೀವನ ಸಮಿತಿಯಲ್ಲಿ ಸೇರಿಕೊಂಡು ಸಮಾಜದಲ್ಲಿ ಅತ್ಯುನ್ನತ ಸ್ಥಾನಮಾನದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದ ಅವರು ಜಿಲ್ಲೆಯಲ್ಲಿ 922 ಕ್ಕೂ ಮಿಕ್ಕಿ ಜನಜೀವನ ಸಮಿತಿಗಳು ಕಾರ್ಯಾಚರಿಸುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಾದ್ಯಂತ ವಾರ್ಷಿಕವಾಗಿ 356 ಸ್ವಾಸ್ಥ ಸಂಕಲ್ಪ ಕಾರ್ಯಕ್ರಮವನ್ನು ಆಯೋಜಿಸಿ 4,635 ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗಿದೆ. ವಾರ್ಷಿಕವಾಗಿ 7 ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಪ್ರಸಕ್ತ ವರ್ಷ ಈಗಾಗಲೇ 5 ಶಿಬಿರಗಳನ್ನು ನಡೆಸಲಾಗಿದೆ ಎಂದರು.

ಶಿಬಿರ ಮುಗಿದ 100 ದಿನದ ಬಳಿಕ ವ್ಯಸನ ಮುಕ್ತರನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕರೆದೊಯ್ದು ದೇವರ ದರ್ಶನ, ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರಿಂದ ಮಾರ್ಗದರ್ಶನ,ಮಾಹಿತಿ ಕಾರ್ಯಕ್ರಮ ನಡೆಸಲಾಗುತ್ತದೆ. ನವಜೀವನ ಸಮಿತಿ ಸದಸ್ಯರಲ್ಲಿ ಸಾಧನೆಗೈದವರಿಗೆ ಜಾಗೃತಿ ಅಣ್ಣ ಮತ್ತು ಜಾಗೃತಿಮಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಸ್ವ-ಉದ್ಯೋಗ ಕೌಶಲ್ಯ, ಅಭಿವೃದ್ಧಿ ತರಬೇತಿಗಳನ್ನು ನೀಡಿ ನವಜೀವನ ಸದಸ್ಯರ ಬದುಕಿನಲ್ಲಿ ಹೊಸ ಬೆಳಕು ಮೂಡಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಡಾ.ವಿರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಈ ಯೋಜನೆ ಇದೀಗ ಕರ್ನಾಟಕ ರಾಜ್ಯದ 30 ಜಿಲ್ಲೆಗೂ ವಿಸ್ತರಿಸಿ ಲಕ್ಷೋಪಲಕ್ಷ ಕುಟುಂಬ ಅಭಿವೃದ್ಧಿಯ ಬೆಳಕಿನಲ್ಲಿ ಸಾಗುತ್ತಿದೆ ಎಂದರು.

ಮೂಡಬಿದ್ರೆಯಲ್ಲಿ ಸಮಾವೇಶ:

ಜಿಲ್ಲಾ ಮಟ್ಟದ ನವಜೀವನ ಸದಸ್ಯರ ಅಭಿನಂದನಾ ಸಮಾರಂಭ ಈ ವರ್ಷ ಅ. 2ರಂದು ಮೂಡಬಿದಿರೆ  ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಈ ಸಮಾವೇಶದಲ್ಲಿ 500 ಮಂದಿ ನವಜೀವನ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ ಸುಳ್ಯ ತಿಳಿಸಿದರು.

ಹಾಗೆಯೇ ಅಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲೂ ಜನಜಾಗೃತಿ ವೇದಿಕೆಯ ತಾಲೂಕು ಘಟಕದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಬೆಳ್ತಂಗಡಿ, ಸಾಜ ರಾಧಕೃಷ್ಣ ಆಳ್ವ ಪುತ್ತೂರು,ಪ್ರತಾಪಸಿಂಹ ನಾಯಕ್ ಬೆಳ್ತಂಗಡಿ, ಮಾಜಿ ಶಾಸಕ ರುಕ್ಮಯಪೂಜಾರಿ, ವಿವಿಧ ತಾಲೂಕು ಜ.ಜಾ.ವೇದಿಕೆಯ ಅಧ್ಯಕ್ಷ ಆಶ್ವಥ್ ಪೂಜಾರಿ, ಮಹಾಬಲ ಚೌಟ, ಮಹಾಬಲ, ವಿಶ್ವನಾಥ್, ಶಾರದಾರೈ, ಬಾಲಕೃಷ್ಣ ಆಳ್ವ ಕೊಡಾಜೆ, ಕಿರಣ್ ಹೆಗ್ಡೆ, ಪ್ರಕಾಶ್ ಕಾರಂತ್, ರೋನಾಲ್ಡ್ ಡಿಸೋಜ ಅಮ್ಟಾಡಿ, ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News