ಶ್ರೀನಿವಾಸ ಪೂಜಾರಿಗೆ ಉಡುಪಿ ಉಸ್ತುವಾರಿ ಕೈತಪ್ಪಿರುವುದರ ಹಿಂದೆ ಶಾಸಕರುಗಳ ಕೈವಾಡ: ಬಿಲ್ಲವ ಮುಖಂಡರ ಆರೋಪ

Update: 2019-09-17 13:42 GMT

ಉಡುಪಿ, ಸೆ.17: ಬಿಲ್ಲವ ಮುಖಂಡರಾಗಿರುವ, ಸಾಕಷ್ಟು ಅನುಭವ ಹೊಂದಿರುವ ಸರಳ ಸಜ್ಜನಿಕೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ತಪ್ಪಿಸಿ, ದ.ಕ. ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಿರುವುದರ ಹಿಂದೆ ಜಿಲ್ಲೆಯ ಐವರು ಶಾಸಕರ ಒತ್ತಡವೇ ಕಾರಣ ಎಂಬ ಗುಮಾನಿ ಇದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ಅಚ್ಯುತ ಕಲ್ಮಾಡಿ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವ ಸ್ಥಾನ ತಪ್ಪಿಸಲು ಒತ್ತಡ ಹಾಕಿರುವ ಶಾಸಕರುಗಳ ಮನೆಗೆ ಬಿಲ್ಲವ ಮುಖಂಡರು ಹೋಗಿ ಮನವಿ ಮಾಡುವ ಕೆಲಸ ಮಾಡಲಾಗುವುದು. ಇದಕ್ಕೆ ಒಪ್ಪದಿದ್ದರೆ ಮುಂದಿನ ನಡೆ ಬಗ್ಗೆ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದಲ್ಲಿ ಸೆ.19ರಂದು ಬಿಲ್ಲವರ ಎಲ್ಲ ಸಂಘಟನೆಯ ಪ್ರಮುಖ ಸೇರಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಕೋಟ ಶ್ರೀನಿವಾಸ ಪೂಜಾರಿಗೆ ಯಾವುದೇ ಲಾಬಿ ಮಾಡದೆ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಅವರಿಗೆ ದ.ಕ. ಜಿಲ್ಲೆಯ ಉಸ್ತುವಾರಿ ನೀಡಿರುವುದು ಸರಿಯಲ್ಲ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಿಲ್ಲವರ ಅತ್ಯಂತ ಅಧಿಕ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ ಐವರು ಶಾಸಕರು ಬಿಲ್ಲವರ ಮತ ಬ್ಯಾಂಕ್‌ನಿಂದಾಗಿಯೇ ಗೆದ್ದು ಬಂದಿದ್ದಾರೆ. ಆದುದರಿಂದ ಬಿಲ್ಲವರ ಮನಸ್ಸಿಗೆ ನೋವು ಮಾಡದೆ ಶ್ರೀನಿವಾಸ ಪೂಜಾರಿಗೆ ಜಿಲ್ಲಾ ಉಸ್ತುವಾರಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ಶ್ರೀನಿವಾಸ ಪೂಜಾರಿಗೆ ಅನ್ಯಾಯ ಮಾಡಲಾಗಿದೆ. ಹಿಂದಿನ ಸರಕಾರದಲ್ಲಿ ವಿನಯ ಕುಮಾರ್ ಸೊರಕೆ ಅವರ ಮಂತ್ರಿ ಸ್ಥಾನವನ್ನು ತಪ್ಪಿಸಿ ಅರ್ಧದಲ್ಲಿ ಬೇರೆಯವರಿಗೆ ನೀಡಲಾಗಿತ್ತು. ಈ ಮೂಲಕ ರಾಜಕಾರಣಿಗಳು ಬಿಲ್ಲವರು ತಮ್ಮ ಮನೆಯ ಸೊತ್ತು ಎಂಬುದಾಗಿ ತಿಳಿದುಕೊಂಡಿದ್ದಾರೆ ಎಂದು ಅವರು ದೂರಿದರು.

ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಮಾತನಾಡಿ, ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ತಪ್ಪಿಸಿರುವುದು ಜಿಲ್ಲೆಯ ಬಿಲ್ಲವ ಸಮಾಜಕ್ಕೆ ಮಾಡಿರುವ ಅವಮಾನ. ಶಾಸಕರನ್ನು ಬಿಟ್ಟು ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿರುವ ಕಾರಣಕ್ಕೆ ಜಿಲ್ಲೆಯ ಐದು ಶಾಸಕರು ಕೋಟಗೆ ಉಡುಪಿ ಉಸ್ತುವಾರಿಯನ್ನು ತಪ್ಪಿಸಿದ್ದಾರೆ. ಆದುದರಿಂದ ಶಾಸಕರುಗಳು ಮುಖ್ಯಮಂತ್ರಿಗೆ ಒತ್ತಡ ಹಾಕಿ ಕೋಟಗೆ ಉಡುಪಿ ಉಸ್ತು ವಾರಿ ನೀಡುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಪರಿಷತ್ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ, ಮುಖಂಡರಾದ ಕಿರಣ್ ಕುಮಾರ್, ಸುಧಾಕರ ಪಾಂಗಾಳ ಉಪಸ್ಥಿತರಿದ್ದರು.

'ಬಿಲ್ಲವ ಸಮಾಜವನ್ನು ತುಳಿಯುವ ಪ್ರಯತ್ನ'

ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಉಸ್ತುವಾರಿ ನೀಡದಿರುವ ಬಗ್ಗೆ ಉಡುಪಿಯ ಐವರು ಶಾಸಕರುಗಳಿಗೆ ಸ್ವಾಭಿಮಾನ ಇರುತ್ತಿದ್ದರೆ ಕೂಡಲೇ ಹೇಳಿಕೆ ನೀಡುತ್ತಿದ್ದರು. ಆದರೆ ಅವರು ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಈ ಐವರು ಕೂಡ ಕೋಟಗೆ ಉಸ್ತುವಾರಿ ನೀಡದಂತೆ ಹೈಕಮಾಂಡಿಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದು ಬಿಜೆಪಿ ಹಿಂದುಳಿದ ವರ್ಗ ಗಳ ಮೋರ್ಚಾದ ರಾಜ್ಯ ಮುಖಂಡ ಕಿರಣ್ ಕುಮಾರ್ ಆರೋಪಿಸಿದರು.

ಎಲ್ಲ ರಾಜಕೀಯ ಪಕ್ಷಗಳು ಹಿಂದುಳಿದ ಬಿಲ್ಲವ ಸಮುದಾಯವನ್ನು ತುಳಿ ಯುವ ಕೆಲಸ ಮಾಡುತ್ತಿದೆ. ಈ ಮೂಲಕ ಬಿಲ್ಲವ ಸಮುದಾಯ ತುಳಿತಕ್ಕೆ ಒಳಗಾದ ಸಮುದಾಯ ಎಂಬುದನ್ನು ರಾಜಕೀಯ ಪಕ್ಷಗಳು ಸಾಬೀತುಪಡಿಸುತ್ತಿದೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News