ಜನರಿಕ್ ಔಷಧಿ ಮಾರಾಟದಲ್ಲಿ ಕರ್ನಾಟಕ ಪ್ರಥಮ ಸ್ಥಾನ: ಡಾ.ಅನಿಲಾ

Update: 2019-09-17 13:21 GMT

ಉಡುಪಿ, ಸೆ.17: ಪ್ರಧಾನಮಂತ್ರಿ ಜನ ಔಷಧಿ ಕೇಂದ್ರದಲ್ಲಿ ಪ್ರತಿ ತಿಂಗಳು 4-5ಕೋಟಿ ರೂ. ವೌಲ್ಯದ ಔಷಧಿಗಳನ್ನು ಮಾರಾಟ ಮಾಡುವ ಮೂಲಕ ಕರ್ನಾಟಕ ರಾಜ್ಯ ಮಾರಾಟದಲ್ಲಿ ಇಡೀ ದೇಶದಲ್ಲಿ ಮೊದಲನೆ ಸ್ಥಾನ ಪಡೆದು ಕೊಂಡಿದೆ ಎಂದು ಪ್ರಧಾನ ಮಂತ್ರಿ ಜನ ಔಷಧಿ ಪರಿಯೋಜನೆಯ ಕರ್ನಾಟಕ ನೋಡೆಲ್ ಅಧಿಕಾರಿ ಡಾ.ಅನಿಲಾ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದೇಶದಲ್ಲಿ ಒಟ್ಟು 5600 ಜನ ಔಷಧಿ ಕೇಂದ್ರಗಳಿದ್ದು, ಕರ್ನಾಟಕದಲ್ಲಿ 540 ಕೇಂದ್ರಗಳಿವೆ. ಕೇಂದ್ರಗಳ ಸಂಖ್ಯೆಯಲ್ಲಿ ಉತ್ತರ ಪ್ರದೇಶ ಪ್ರಥಮ, ತಮಿಳುನಾಡು ದ್ವಿತೀಯ ಹಾಗೂ ಕರ್ನಾಟಕ ತೃತೀಯ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಎಲ್ಲ ತಾಲೂಕುಗಳಲ್ಲಿಯೂ ಈ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಅವಿಭಜಿತ ದ.ಕ. ಜಿಲ್ಲೆ ಜನರಿಕ್ ಔಷಧ ಖರೀದಿಯಲ್ಲಿ ಮೊದಲನೆ ಸ್ಥಾನದಲ್ಲಿ ಇದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 22 ಕೇಂದ್ರಗಳಿವೆ. ಅತ್ಯಂತ ಹೆಚ್ಚು 52 ಕೇಂದ್ರಗಳು ಮೈಸೂರು ಜಿಲ್ಲೆಯಲ್ಲಿವೆ ಎಂದರು.

ಜನರಿಕ್ ಔಷಧಿ ಜನ ಔಷಧ ಕೇಂದ್ರಗಳಲ್ಲಿ ಹೊರತು ಬೇರೆ ಮೆಡಿಕಲ್ ಗಳಲ್ಲಿ ಮಾರಾಟ ಮಾಡಲು ಅವಕಾಶ ಇಲ್ಲ. ನಮ್ಮಲ್ಲಿ ಔಷಧಿ ಸರಬರಾಜಿನಲ್ಲಿ ಸಮಸ್ಯೆ ಇದೆಯೇ ಹೊರತು ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ 1200 ಔಷಧಿ ಕಂಪೆನಿಗಳ ಪೈಕಿ 100 ಔಷಧಿ ಕಂಪೆನಿಗಳು ಜನ ಔಷಧಿ ಪರಿಯೋಜನೆಗೆ ಔಷಧಗಳನ್ನು ಸರಬರಾಜು ಮಾಡುತ್ತಿದೆ. 2018ರಲ್ಲಿ ಉತ್ತಮ ಔಷಧಿಯನ್ನು ಪೂರೈಸದ 29ಲ ಕಂಪೆನಿ ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಿಯೋಜನೆಯ ಮಾರ್ಕೆಟಿಂಗ್ ಜನರಲ್ ಮೆನೆಜರ್ ಹರೀಶ್ ಶರ್ಮ, ಅಭಿಷೇಕ್ ಜೈನ್, ಸಾಗರ್ ತೇಜ್‌ಪಾಲ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News