ಕಾಪುವಿನಲ್ಲಿ ವಿಶ್ವಕರ್ಮ ಜಯಂತಿ

Update: 2019-09-17 13:29 GMT

ಕಾಪು: ವಿಶ್ವಕರ್ಮರು ಕರಕುಶಲಕರ್ಮಿಗಳಾಗಿ, ಶಿಲ್ಪಿಗಳಾಗಿ, ವಾಸ್ತುತಜ್ಞರಾಗಿ ಪರಿಪೂರ್ಣತೆ ಪಡೆದವರಾಗಿದ್ದಾರೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಕಾಪು ತಾಲೂಕು ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬ ಸಮಿತಿ ಕಾಪು ಶ್ರೀ ಕಾಳಿಕಾಂಬ ದೇವಸ್ಥಾನದ ನಾಗಲಿಂಗ ಸ್ವಾಮಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುರುಡೇಶ್ವರ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಚೇಂಪಿ ದಿನೇಶ್ ಆಚಾರ್ಯ ಮಾತನಾಡಿ, ವೇದ, ಉಪನಿಷತ್ ಕಾಲದಲ್ಲಿಯೂ ವಿಶ್ವಕರ್ಮ ದೇವರಿಗೆ ಶೇಷ್ಠ ಸ್ಥಾನಮಾನ ನೀಡಲಾಗಿದೆ.  ಸಮಸ್ತ ಕರ್ಮಗಳಲ್ಲಿಯೂ ವಿಶ್ವಕರ್ಮ ದೇವರನ್ನು ಪರಿಕಲ್ಪನೆಗೆ ತೆಗೆದುಕೊಳ್ಳದೆ ಬದುಕಲು ಅಸಾಧ್ಯ. . ಸಾಮಾನ್ಯ ಜನರಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಮೂಲಕ ಸರ್ಕಾರವು ಎಲ್ಲರನ್ನೂ ಎಚ್ಚೆತ್ತುಕೊಳ್ಳುವಂತೆ ಮಾಡಿದೆ ಎಂದರು. 

ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಾಪು ತಾಲೂಕು ವಿಶ್ವಕರ್ಮ ಸಂಘಟನೆಯಿಂದ ನೀಡಿದ ರೂ. 15 ಸಾವಿರ ಮೊತ್ತದ ಚೆಕ್ ಅನ್ನು ಶಾಸಕರಿಗೆ ಹಸ್ತಾಂತರಿಸಲಾಯಿತು. ಅನಾರೋಗ್ಯಕ್ಕೆ ತುತ್ತಾದ ಪುರೋಹಿತ ಪಾದೂರು ಪಿ.ಕೆ. ಶ್ರೀಧರ ಆಚಾರ್ಯ ಹಾಗೂ ವಿದ್ಯಾರ್ಥಿನಿಯೋರ್ವಳಿಗೆ ಸಹಾಯಧನ ಹಾಗೂ ಹೂ ಕಟ್ಟುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿಕಾಂತ ಪಡುಬಿದ್ರಿ, ವಿಲ್ಸನ್ ರಾಡ್ರಿಗಸ್, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ, ತಹಶೀಲ್ದಾರ್ ಮಹಮ್ಮದ್ ಇಸಾಕ್, ಉಪ ತಹಶೀಲ್ದಾರ್ ಕಲ್ಲಮುರುಡಪ್ಪ, ಕಾಪು ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ, ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಮುರಳೀಧರ್, ಕಾಪು ವಿಧಾನಸಭಾ ಕ್ಷೇತ್ರ ವಿಶ್ವಬ್ರಾಹಣ ಯುವ ಸಂಘಟನೆ ಅಧ್ಯಕ್ಷ ಗಣೇಶ್ ಆಚಾರ್ಯ ಉಚ್ಚಿಲ ಉಪಸ್ಥಿತರಿದ್ದರು.

ಕಾಪು ಕಾಳಿಕಾಂಬ ದೇವಸ್ಥಾನ ಎರಡನೆ ಮೊಕ್ತೇಸರ ದಿಂಡಿಬೆಟ್ಟು ಗಂಗಾಧರ ಆಚಾರ್ಯ ಸ್ವಾಗತಿಸಿದರು. ವಿಶ್ವಬ್ರಾಹ್ಮಣ ಯುವಸಂಘಟನೆ ಕಾರ್ಯದರ್ಶಿ ರಾಜೇಶ್ ಆಚಾರ್ಯ ಬಿಳಿಯಾರು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News