ಹೆಚ್ಚುತ್ತಿರುವ ಅಸಮಾನತೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಅರುಣಾ ರಾಯ್

Update: 2019-09-17 15:01 GMT

ಮಂಗಳೂರು,ಸೆ.17:ದೇಶದಲ್ಲಿ ಬೆಳೆಯುತ್ತಿರುವ ಬಹುವಿಧದ ಅಸಮಾನತೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಾಗಿದೆ ಎಂದು ಖ್ಯಾತ ಸಮಾಜ ಸೇವಕಿಮಾಹಿತಿ ಹಕ್ಕು ಹೋರಾಟಗಾರರಾದ ಅರುಣ ರಾಯ್ ತಿಳಿಸಿದ್ದಾರೆ.

ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿಂದು ದಿವಂಗತ ವಂ.ಕ್ಲೌಡ್ ಡಿ ಸೋಜ ವಂ.ಎಂಬ್ರೋಸ್ ಪಿಂಟೋ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿಂದು ಸಾಮಾಜಿಕ ಚಳವಳಿಯ ಬಗ್ಗೆ ಮಾತನಾಡುತ್ತಿದ್ದರು.

ಭಾರತ ವೈವಿಧ್ಯತೆಗಳನ್ನು ಹೊಂದಿರುವ ದೇಶ .ಆದರೆ ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮ, ಸಂಸ್ಕೃತಿ ಸೇರಿದಂತೆ ವಿವಿಧ ವಲಯಗಳಲ್ಲಿ ಅಸಮಾನತೆ ಬೆಳೆಯುತ್ತಿದೆ. ಇದು ಭಾರತದಂತಹ ಪ್ರಜಾಪ್ರಭುತ್ವ ದೇಶಕ್ಕೆ ಅಪಾಯದ ಸಂಕೇತವಾಗಿದೆ. ದೇಶವನ್ನು ನ್ಯಾಯ ಮತ್ತು ಸಮಾನತೆ ಆಧಾರದಲ್ಲಿ ಕಟ್ಟಬೇಕಾಗಿದೆ. ಆದರೆ ದೇಶದಲ್ಲಿ ಇತ್ತಿಚಿನ ದಿನಗಳಲ್ಲಿ ದೇಶದ ಸಂವಿಧಾನ ಬದ್ಧ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ತಾವು ಆರಿಸಿದ ಸರಕಾರವನ್ನು ಪ್ರಶ್ನಿಸುವ ಅಧಿಕಾರವನ್ನು ನೀಡಲಾಗಿದೆ. ಸಂವಿಧಾನದಲ್ಲಿ ನೀಡಲಾದ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕನ್ನು ಚಲಾಯಿಸಲು ಪ್ರಜೆಗಳಿಗೆ ಅಧಿಕಾರವಿದೆ. ಪ್ರಜಾಪ್ರಭುತ್ವದಲ್ಲಿ ಮತಚಲಾಯಿಸುವ ಪ್ರತಿಯೊಬ್ಬ ಪ್ರಜೆಯೂ ರಾಜಕೀಯ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ದೇಶದಲ್ಲಿ ನೋಟ್ ಬ್ಯಾನ್ ಆದ ಸಂದರ್ಭದಂತಹ ಮಹತ್ವದ ತೀರ್ಮಾನದ ಬಗ್ಗೆ ಜನಾಭಿಪ್ರಾಯವನ್ನು ಪಡೆಯುವುದು, ಜನರು ತಮ್ಮ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಸರಕಾರವನ್ನು ಪ್ರಶ್ನಿಸುವ ಅಧಿಕಾರವನ್ನು ಹೊಂದಿದ್ದಾರೆ. ಮತಚಲಾಯಿಸಿ ಸುಮ್ಮನಿದ್ದರೆ ಮತದಾರರ ಹೊಣೆಗಾರಿಕೆ ಪೂರ್ಣಗೊಳ್ಳುವುದಿಲ್ಲ. ದೇಶದಲ್ಲಿ ಜಾರಿಗೆ ಬರುತ್ತಿರುವ ಕಾನೂನು, ಅದರಿಂದ ತಮ್ಮ ಮೇಲೆ ದುಷ್ಪರಿಣಾಮಗಳಾಗುತ್ತಿದ್ದರೆ ಅದನ್ನು ಪ್ರಶ್ನಿಸುವ ಅಧಿಕಾರ ಪ್ರಜೆಗಳಿಗಿದೆ. ತಾವು ಆಯ್ಕೆ ಮಾಡಿದ ಜನಪ್ರತಿನಿಧಿಯನ್ನು ಪ್ರಶ್ನಿಸುವ ರಾಜಕೀಯ ಜಾಗೃತಿ ಮತದಾರನಿಗಿರಬೇಕಾಗಿದೆ ಎಂದು ಅರುಣ ರಾಯ್ ತಿಳಿಸಿದ್ದಾರೆ.

►ಆಡಳಿತದಲ್ಲಿ ಪಾರದರ್ಶಕತೆ ಮುಖ್ಯ: ಆಡಳಿತದಲ್ಲಿ ಪಾರದರ್ಶಕ ವ್ಯವಸ್ಥೆ ಮುಖ್ಯ. ಈ ನಿಟ್ಟಿನಲ್ಲಿ ದೇಶದಲ್ಲಿ ಜಾರಿಯಾದ ಮಾಹಿತಿ ಹಕ್ಕು ಜನರಿಗೆ ಶಕ್ತಿ ನೀಡಿದೆ. ಮಹಾತ್ಮ ಗಾಂಧಿ ಉದ್ಯೋಗ ಭರವಸೆ ಯೋಜನೆಯಲ್ಲಾಗುತ್ತಿದ್ದ ಭ್ರಷ್ಟಾಚಾರವನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ರಾಜಸ್ಥಾನದಲ್ಲಿ ಬರಗಾಲದ ಸಂದರ್ಭದಲ್ಲಿ ಜನರೊಂದಿಗೆ ಮಾಹಿತಿ ಹಕ್ಕಿಗಾಗಿ ಹೋರಾಡಿದ ತಮ್ಮ ಅನುಭವವನ್ನು ಅರುಣ ರಾಯ್ ಹಂಚಿಕೊಂಡರ ಅವರು, ಆ ಸಂದರ್ಭದಲ್ಲಿ ಅಲ್ಲಿನ ಜನರಿಗೆ ನೀರು, ಆಹಾರದ ಕೊರತೆ ಇದ್ದಾಗ ಅವರ ಪ್ರಥಮ ಆಧ್ಯತೆ ಉದ್ಯೋಗ ಆಗಿತ್ತು. ಉದ್ಯೋಗ ನೀಡುವ ಯೋಜನೆಯಲ್ಲಿ ಅವ್ಯವಹಾರ ನಡೆದಾಗ ಅದನ್ನು ಪತ್ತೆ ಹಚ್ಚಲು ಮಾಹಿತಿ ಹಕ್ಕು ಸಹಾಯವಾಯಿತು ಎಂದು ತಿಳಿಸಿದರು.

ಮಾಹಿತಿ ಹಕ್ಕು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನು ಆಳುವ ವ್ಯವಸ್ಥೆಯ ಬಗ್ಗೆ ಪ್ರಶ್ನಿಸುವ ಹಕ್ಕು ನೀಡಿದ ಮಹತ್ವದ ಕಾನೂನು ಆಗಿದೆ. ದೇಶದದಲ್ಲಿ ಪ್ರತಿವರ್ಷ 6ಲಕ್ಷ ಜನರು ಮಾಹಿತಿ ಹಕ್ಕಿನ ಆಧಾರದಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಸುಮಾರು 10 ಕೋಟಿ ಜನರು ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಉದ್ಯೋಗ ಪಡೆಯುವಂತಾಗಿದೆ ಎಂದು ಅರುಣ ರಾಯ್ ತಿಳಿಸಿದ್ದಾರೆ.

ಬೀದಿಯೆ ನನ್ನ ಸಂಸತ್ತು: ಆಡಳಿತ ವ್ಯವಸ್ಥೆಯ ಲೋಪ ದೋಷಗಳನ್ನು ನನಗೆ ಮೊದಲು ತಿಳಿಸಿದವರು ಬೀದಿಯ ಜನರು. ಅಲ್ಲಿ ಸರಕಾರದ ನಿರ್ಧಾರಗಳ ಬಗ್ಗೆ ಸರಿತಪ್ಪುಗಳ ಬಗ್ಗೆ ಮುಕ್ತ ಚರ್ಚೆಗಳಾಗುತ್ತದೆ. ಅಲ್ಲಿಂದ ನಾನು ಸಾಕಷ್ಟು ಮಾಹಿತಿ ಪಡೆದಿದ್ದೇನೆ. ಅಂತಹ ಬೀದಿಯನ್ನು ನಾನು ನನ್ನ ಸಂಸತ್ತು ಎಂದು ಭಾವಿಸುತ್ತೇನೆ. ದೇಶದ ಜನರಿಗೆ ಸಂಬಂಧಿಸಿದ ಕಾನೂನುಗಳನ್ನು ಜಾರಿ ಮಾಡುವಾಗ ಏಕಾಏಕಿ ನಿರ್ಧಾರ ತೆಗದುಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾದ ಕ್ರಮವಲ್ಲ. ಸರಕಾರದ ನಿರ್ಧಾರಗಳನ್ನು ಪ್ರಶ್ನಿಸುವವರಿಗೆ ದೇಶದ್ರೋಹಿ ಪಟ್ಟಕಟ್ಟುವುದು, ಭೀತಿಯನ್ನು ಹುಟ್ಟಿಸುವುದು ಸರಿಯಲ್ಲ. ಸರಕಾರ ಕಾನೂನು ಆಧಾರಿತವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅರುಣ ರಾಯ್ ತಿಳಿಸಿದ್ದಾರೆ.

ಸಾಮೂಹಿಕ ಥಳಿತ, ಭೀತಿ ಹುಟ್ಟಿಸುವುದು, ಸರಕಾರದ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಇಲ್ಲ ಎನ್ನುವುದನ್ನು ಸೂಚಿಸುತ್ತದೆ. ದೇಶದ ಕಾನೂನು ಸಮಾಜದಲ್ಲಿನ ಅಶಕ್ತರ ದುರ್ಬಲರ ರಕ್ಷಣೆಗೆ ಇರುವಂತಹುದು. ಆದರೆ ಅವರಿಗೆ ಕಾನೂನಿನಲ್ಲಿ ರಕ್ಷಣೆ ಇಲ್ಲದೆ ಇರುವುದು ಆಡಳಿತ ಲೋಪವಾಗುತ್ತದೆ. ದೇಶದಲ್ಲಿ ದಲಿತರು, ಮುಸಲ್ಮಾನರು, ಮಹಿಳೆಯರು ಎಂದು ಬೇರೆ ಬೇರೆ ಕಾರಣಗಳಿಗಾಗಿ ಹಲ್ಲೆ ಥಳಿತ, ಭೀತಿಯ ವಾತಾವರಣದ ಸೃಷ್ಟಿಸುವವರ ವಿರುದ್ದ ತಕ್ಷಣ ಸೂಕ್ತ ಕ್ರಮ ಕೈ ಗೊಳ್ಳಬೇಕಾಗಿರುವುದು ಅಲ್ಲಿನ ಆಡಳಿತದ ಹೊಣೆಗಾರಿಕೆಯಾಗಿದೆ ಎಂದು ಅರುಣಾ ರಾಯ್ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಸಂತ ಅಲೊಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ.ಡಿಯೋನಿಸಿಯಸ್‌ವಾಸ್ ವಹಿಸಿದ್ದರು. ಪ್ರಾಂಶುಪಾಲ ವಂ.ಪ್ರವೀಣ್ ಮಾರ್ಟಿಸ್ ಸ್ವಾಗತಿಸಿದರು. ಶ್ವೇತಾ ರಸ್ಕಿನಾ ವಂದಿಸಿದರು. ವಂ.ಪ್ರಾನ್ಸಿಸ್ ಗುಂಟಿಪಿಲ್ಲಿ ಹಾಗೂ ಜೋಸ್ಲಿನ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News