ಯುನಿವೆಫ್ ನಿಂದ ಜೀಪ್ ಜಾಥಾ

Update: 2019-09-17 17:52 GMT

ಮಂಗಳೂರು: ಯುನಿವೆಫ್ ಕರ್ನಾಟಕ ಪ್ರತಿ ವರ್ಷದಂತೆ ಈ ವರ್ಷವೂ "ಓದಿರಿ ಸೃಷ್ಟಿಕರ್ತನ ಸಂದೇಶವನ್ನು" ಎಂಬ ಕುರ್ ಆನ್ ಪರಿಚಯ ಅಭಿಯಾನವನ್ನು ದ.ಕ. ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ. ಆಗಸ್ಟ್ 27 ರಿಂದ ಸೆಪ್ಟೆಂಬರ್ 27 ರ ವರೆಗೆ ಒಂದು ತಿಂಗಳ ಕಾಲದ ಈ ಅಭಿಯಾನವು ಸೆಪ್ಟೆಂಬರ್ 27 ರಂದು "ಧರ್ಮಗ್ರಂಥಗಳು ಮತ್ತು ಸಮಾಜ ನಿರ್ಮಾಣ" ಎಂಬ ವಿಷಯದಲ್ಲಿ ನಡೆಯಲಿರುವ "ಸ್ನೇಹ ಸಂವಾದ" ಎಂಬ ಅಂತರ್ಧರ್ಮೀಯ ಸಂವಾದ ಕಾರ್ಯಕ್ರಮದೊಂದಿಗೆ ಸಮಾರೋಪಗೊಳ್ಳಲಿದೆ. 

ಈ ಅಭಿಯಾನದ ಮೂಲಕ ಕುರ್ ಆನ್ ವಚನಗಳ ವಾಸ್ತವಿಕತೆ, ಹಿನ್ನೆಲೆ ಹಾಗೂ ಮಾನವೀಯ ಸಂದೇಶಗಳನ್ನು ಜನರಿಗೆ ತಲುಪಿಸಿ, ಕುರ್ ಆನ್ ನ ಬಗ್ಗೆ ಅವರ ಸಂಶಯ ಅಪಕಲ್ಪನೆಗಳನ್ನು ದೂರೀಕರಿಸುವ ಪ್ರಯತ್ನ ಇದಾಗಿದೆ. ಈ ನಿಟ್ಟಿನಲ್ಲಿ ಸೆ. 19 ರ ಗುರುವಾರ ಅಪರಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕುದ್ರೋಳಿ A1 ಭಾಗ್ ನಿಂದ ನಗರದ ಸ್ಟೇಟ್ ಬ್ಯಾಂಕ್ ವರೆಗೆ ಜೀಪ್ ಜಾಥಾವನ್ನು ಹಮ್ಮಿಕೊಂಡಿದ್ದು ಆಯ್ದ ಸ್ಥಳಗಳಲ್ಲಿ ಕಾರ್ನರ್ ಮೀಟಿಂಗ್, ಕರಪತ್ರ ವಿತರಣೆ ಹಾಗೂ ಪ್ರಚಾರ ಕಾರ್ಯಕ್ರಮ ನಡೆಯಲಿರುವುದು. ಶಾಂತಿ ಸೌಹಾರ್ದದ ಸಮಾಜ ನಿರ್ಮಾಣದ ಗುರಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಬೆಂಬಲವನ್ನು ಯುನಿವೆಫ್ ಅಪೇಕ್ಷಿಸುತ್ತದೆ ಎಂದು ಅಭಿಯಾನ ಸಂಚಾಲಕ ಸೈಫುದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News