ದೀಪಾ ಕರ್ಮಾಕರ್ ಟೋಕಿಯೊ ಒಲಿಂಪಿಕ್ಸ್ ಕನಸು ಬಹುತೇಕ ಅಂತ್ಯ

Update: 2019-09-17 18:15 GMT

ಹೊಸದಿಲ್ಲಿ, ಸೆ.17: ಜರ್ಮನಿಯ ಸ್ಟಟ್‌ಗರ್ಟ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಎಫ್‌ಐಜಿ ವರ್ಲ್ಡ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ಗಾಗಿ ನಡೆಯುವ ಆಯ್ಕೆ ಟ್ರಯಲ್ಸ್ ಗಿಂತ ಮೊದಲು ಭಾರತದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮಂಡಿಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಕನಸು ಬಹುತೇಕ ಅಂತ್ಯವಾಗಿದೆ.

ತ್ರಿಪುರಾದ ಜಿಮ್ನಾಸ್ಟ್ ದೀಪಾ ಅವರ ದೀರ್ಘಕಾಲದ ಕೋಚ್ ಬಿಸ್ವೇಸ್ವರ ನಂದಿ, ತನ್ನ ಶಿಷ್ಯೆ ಚೇತರಿಸಿಕೊಳ್ಳಲು ಇನ್ನೂ ಎರಡು ತಿಂಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ. ದಿಲ್ಲಿಯ ಐಜಿಐ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಟ್ರಯಲ್‌ಗೆ ಹಾಜರಾಗುವಂತೆ ಭಾರತದ ಜಿಮ್ನಾಸ್ಟಿಕ್ ಒಕ್ಕೂಟ ಹಾಗೂ ಭಾರತ ಕ್ರೀಡಾ ಪ್ರಾಧಿಕಾರ(ಸಾಯ್)ದೀಪಾಗೆ ಅಧಿಸೂಚನೆ ನೀಡಿತ್ತು. ಅದರಲ್ಲಿ ಸಾಯ್ ಟೀಮ್‌ಗಳ ವಿಭಾಗೀಯ ಮುಖ್ಯಸ್ಥ ರಾಧಿಕಾ ಶ್ರೀಮನ್‌ರ ಸಹಿ ಇರಲಿಲ್ಲ.

ಶನಿವಾರ ಸಂಜೆ ಟ್ರಯಲ್ಸ್‌ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಸೋಮವಾರ ಬೆಳಗ್ಗೆ 8 ಗಂಟೆಗೆ ಟ್ರಯಲ್ಸ್‌ಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆಗ ನಾವು ತ್ರಿಪುರಾದಲ್ಲಿ ಅಭ್ಯಾಸ ನಡೆಸುತ್ತಿದ್ದೆವು. ಟ್ರಯಲ್ಸ್‌ನಲ್ಲಿ ಹಾಜರಾದವರು ದಿಲ್ಲಿಯಲ್ಲಿ ರಾಷ್ಟ್ರೀಯ ಶಿಬಿರದಲ್ಲಿದ್ದರು. ನೋಟೀಫಿಕೇಶನ್‌ಗೆ ಸಹಿ ಹಾಕಿರಲಿಲ್ಲ. ಹಾಗಾಗಿ ಇದನ್ನು ಸಾಯಿ ಕಳುಹಿಸಿರುವುದೇ, ಬೇರೆ ಯಾರೋ ಕಳುಹಿಸಿರುವುದೋ ಎಂಬುದು ನಮಗೆ ಗೊತ್ತಾಗಲಿಲ್ಲ. ನಾನು ಜಿಎಫ್‌ಐ ಅಧಿಕಾರಿಗಳನ್ನು ಫೋನ್ ಮುಖಾಂತರ ಸಂಪರ್ಕಿಸಲು ಯತ್ನಿಸಿದ್ದು, ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ನಂದಿ ಆರೋಪಿಸಿದರು.

ದೀಪಾ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ತುಂಬಾ ಕಷ್ಟಕರ. ಸ್ಟರ್ಟ್‌ಗರ್ಟ್ ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ದೀಪಾಗೆ ಉತ್ತಮ ಅವಕಾಶ ಒದಗಿಸಿತ್ತು. ಮುಂದಿನ ಮೂರು ವಿಶ್ವಕಪ್‌ಗಳು ಟೋಕಿಯೊ ಕ್ವಾಲಿಫೈಯರ್‌ಗಳಾಗಿದ್ದು ಮೂರು ಕೂಟಗಳಲ್ಲಿ ಚಿನ್ನದ ಪದಕ ಜಯಿಸುವವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ದೀಪಾರನ್ನು ಸಜ್ಜುಗೊಳಿಸುತ್ತೇನೆ ಎಂದು ನಂದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News