ಶರಾವತಿ ಅಭಯಾರಣ್ಯಕ್ಕೆ ಅರಣ್ಯ ಪ್ರದೇಶ ಸೇರ್ಪಡೆ ವಿರೋಧಿಸಿ ಅ.10 ರಂದು ಪ್ರತಿಭಟನೆ

Update: 2019-09-18 11:41 GMT

ಭಟ್ಕಳ: ಶರಾವತಿ ಅಭಯಾರಣ್ಯಕ್ಕೆ ಭಟ್ಕಳ ತಾಲೂಕಿನ ಅರಣ್ಯ ಪ್ರದೇಶವನ್ನು ಸೇರ್ಪಡಿಸಿದ್ದನ್ನು ಖಂಡಿಸಿ ಹಾಗೂ ಸೇರ್ಪಡೆಗೊಂಡ ಪ್ರದೇಶವನ್ನು ಕೈ ಬಿಡಬೇಕೆಂದು ಆಗ್ರಹಿಸಿ ಅ.10 ಗುರುವಾರ ಮುಂಜಾನೆ 10.00 ಗಂಟೆಗೆ ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೆ. 17 ರಂದು ಸ್ಥಳಿಯ ಸತ್ಕಾರ ಹೊಟೇಲ್‍ನ ಸಭಾಂಗಣದಲ್ಲಿ ಜರುಗಿದ ತಾಲೂಕಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಭೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಹಾಗೂ ವೇದಿಕೆ ತಾಲೂಕಾಧ್ಯಕ್ಷ ರಾಮಾ ಮೊಗೇರ ಉಪಸ್ಥಿತಿಯಲ್ಲಿ ತೀರ್ಮಾನಿಸಲಾಗಿದೆ.

ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ವಲಯ ಅರಣ್ಯ ವ್ಯಾಪ್ತಿಯ ಕೊಪ್ಪ, ಹೆಂಜಾಲಿ, ಅಗ್ಗ, ಬಡಾಬಾಗ, ಹೆಸರವಲ್ಲಿ, ಹಲ್ಯಾಣಿ, ಕೆಕ್ಕೋಡ, ಹಾಡುವಳ್ಳಿ, ಮುರ್ಕೋಡಿ, ಓಣಿಬಾಗ, ಕುರುಂದುರು, ಕುಳವಾಡಿ, ಅರವಕ್ಕಿ, ಹೆಜ್ಜೆ ಮುಂತಾದ ಗ್ರಾಮಗಳನ್ನು ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಜನಾಭಿಪ್ರಾಯ ಮೂಡಿಸುವ ಹಾಗೂ ಅಭಯಾರಣ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಶರಾವತಿ ಅಭಿಯಾನಕ್ಕೆ ಉ.ಕ. ಜಿಲ್ಲೆಯ ಅಘನಾಶಿನಿ ಶಿಂಗಳಿಕ ಸಂರಕ್ಷಿತ 30,000 ಹೆಕ್ಟೇರ್ ಪ್ರದೇಶವನ್ನು ಸರ್ಕಾರ ಏಕಾಏಕಿಯಾಗಿ ಪ್ರಸಕ್ತ ವರ್ಷ ಜೂನ್ ತಿಂಗಳಲ್ಲಿ ಸೇರ್ಪಡೆ ಮಾಡಿ ಅಂತಿಮ ಆದೇಶ ಮಾಡಿರುವುದು ಜನ ವಿರೋಧಿ ನೀತಿಯಾಗಿದ್ದು, ಯೋಜನೆಗೆ ಜನಾಭಿಪ್ರಾಯ ಸಂಗ್ರಹಿಸದೇ ಅಂತಿಮ ಆದೇಶ ಕಾನೂನು ಬಾಹಿರ ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಮಗ್ರ ಯೋಜನೆಯನ್ನು ವಿರೋಧಿಸುವಲ್ಲಿ ಬೃಹತ್ ಪ್ರತಿಭಟನೆಗೆ ಕಾರ್ಯಯೋಜನೆ ಕುರಿತು ಸಭೆಯಲ್ಲಿ ನಿಯೋಜಿಸಲಾಯಿತು.
  
ಜಿಲ್ಲಾ ಸಂಚಾಲಕ ದೇವರಾಜಗೊಂಡ, ಪಾಂಡುರಂಗ ನಾಯ್ಕ, ಕುಮಟಾ ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ, ಶಬ್ಬೀರ, ಶಿವು ಮರಾಠಿ, ಪುಟ್ಟಾ ಮರಾಠಿ, ಈಶ್ವರ ಗೊಂಡ, ರಿಜ್ವಾನ್, ಖಯ್ಯೂಮ್, ಸುಲೇಮಾನ ಸಾಬ, ಈರಪ್ಪಾ ನಾಯ್ಕ, ಮಂಜುನಾಥ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News