ಬಂಟ್ವಾಳ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಕ್ಷಣೆಗಾಗಿ ಸೋರ್ನಾಡುವಿನಲ್ಲಿ ಪೋಸ್ಟ್ ಕಾರ್ಡ್ ಚಳವಳಿ

Update: 2019-09-18 11:52 GMT

ಬಂಟ್ವಾಳ, ಸೆ. 18: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರದ್ದು ಮಾಡಲು ಹೊರಟಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಹಾಗೂ ಕೇಂದ್ರ ಸರಕಾರದ ಸಾಮಾಜಿಕ ಸುರಕ್ಷಾ ಮಸೂದೆ 2018ನ್ನು ರದ್ದುಗೊಳಿಸಲು ಒತ್ತಾಯಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಿಐಟಿಯು ವತಿಯಿಂದ ಬುಧವಾರ ಸೋರ್ನಾಡು ಅಂಚೆ ಕಚೇರಿ ಮುಂದೆ ಪ್ರಧಾನ ಮಂತ್ರಿಗೆ ಪೋಸ್ಟ್ ಕಾರ್ಡನ್ನು ಕಳುಹಿಸುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪೋಸ್ಟ್ ಕಾರ್ಡ್ ಚಳವಳಿಗೆ ಚಾಲನೆ ನೀಡಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ನೋಟ್ ಬ್ಯಾನ್, ಜಿಎಸ್‍ಟಿ ಹಾಗೂ ಕೆಂದ್ರ ಸರಕಾರದ ಆರ್ಥಿಕ ನೀತಿಯಿಂದಾಗಿ ಕಟ್ಟಡ ಕಾರ್ಮಿಕರು ಇಂದು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲದೆ ಈಗ ಇರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರದ್ದು ಮಾಡಿ ಸಾಮಾಜಿಕ ಸುರಕ್ಷಾ ಮಸೂದೆ 2018ನ್ನು ಜಾರಿಗೆ ತಂದು ಕಟ್ಟಡ ಕಾರ್ಮಿಕರನ್ನು ಸೌಲಭ್ಯಗಳಿಂದ ವಂಚಿಸಲು ಹೊರಟಿದ್ದು, ಇದರಿಂದ ದೇಶದ 4ಕೋಟಿ ಕಟ್ಟಡ ಕಾರ್ಮಿಕರು ಬೀದಿಪಾಲಾಗುವರು ಎಂದು ಆತಂಕ ವ್ಯಕ್ತಪಡಿಸಿದ ಅವರು, ಇದರ ವಿರುದ್ಧ ಕಾರ್ಮಿಕರು ತೀವ್ರವಾದ ಹೋರಾಟಕ್ಕೆ ಮುಂದಾಗಬೇಕೆಂದು ಎಂದರು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಉದಯಕುಮಾರ್, ಮುಹಮ್ಮದ್ ಹನೀಫ್, ಲಿಯಾಕತ್ ಅಲಿ ಖಾನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News