ಏಕತಾ ಪ್ರತಿಮೆ ಮತ್ತು ಸ್ವಾತಂತ್ರ್ಯ ಪ್ರತಿಮೆಗಳಿಗೆ ಪ್ರವಾಸಿಗಳ ಭೇಟಿಯನ್ನು ಹೋಲಿಸಿದ ಪ್ರಧಾನಿ

Update: 2019-09-18 15:13 GMT

ಕೇವಡಿಯಾ(ಗುಜರಾತ),ಸೆ.18: ಏಕತಾ ಪ್ರತಿಮೆಯು ಅನಾವರಣಗೊಂಡ 11 ತಿಂಗಳುಗಳಲ್ಲಿಯೇ ಬೃಹತ್ ಸಂಖ್ಯೆಯಲ್ಲಿ ಪ್ರವಾಸಿಗಳನ್ನು ಆಕರ್ಷಿಸುತ್ತಿದ್ದು,ಇದು ಹೆಚ್ಚುಕಡಿಮೆ ಅಮೆರಿಕದ 133 ವರ್ಷಗಳಷ್ಟು ಹಳೆಯದಾದ ಸ್ವಾತಂತ್ರ್ಯ ಪ್ರತಿಮೆಗೆ ಭೇಟಿ ನೀಡುತ್ತಿರುವ ಪ್ರವಾಸಿಗಳ ಸಂಖ್ಯೆಯಷ್ಟೇ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ಹೇಳಿದರು.

 ಮಂಗಳವಾರ 69ನೇ ವರ್ಷಕ್ಕೆ ಕಾಲಿಟ್ಟ ಮೋದಿ ಗುಜರಾತ್‌ನ ನರ್ಮದಾ ಜಿಲ್ಲೆಯ ಕೇವಡಿಯಾದಲ್ಲಿನ ವಿಶ್ವದಲ್ಲಿಯೇ ಅತ್ಯಂತ ಎತ್ತರದ,182 ಮೀ.ಗಳ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಭೇಟಿ ನೀಡಿ ಮಾತನಾಡುತ್ತಿದ್ದರು.

 ದೇಶದ ಮೊದಲ ಗೃಹ ಸಚಿವರಾಗಿದ್ದ ಪಟೇಲ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ 2018,ಅ.31ರಂದು ಈ ಪ್ರತಿಮೆಯನ್ನು ಸಾರ್ವಜನಿಕರಿಗಾಗಿ ಅನಾವರಣಗೊಳಿಸಲಾಗಿತ್ತು.

 ಏಕತಾ ಪ್ರತಿಮೆಯಿಂದಾಗಿ ಕೇವಡಿಯಾ ಮತ್ತು ಗುಜರಾತ ವಿಶ್ವ ಪ್ರವಾಸಿ ನಕ್ಷೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಕಳೆದ 11 ತಿಂಗಳುಗಳಲ್ಲಿ ಭಾರತ ಮತ್ತು ವಿಶ್ವಾದ್ಯಂತದಿಂದ 23 ಲಕ್ಷಕ್ಕೂ ಅಧಿಕ ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಅಂದರೆ,ಸರಾಸರಿ 8,500 ಜನರು ಪ್ರತಿನಿತ್ಯ ಇಲ್ಲಿಗೆ ಆಗಮಿಸುತ್ತಿದ್ದಾರೆ. ಆ.24,ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರವಾಸಿಗಳ ಸಂಖ್ಯೆ 34,000ಕ್ಕೆ ಹೆಚ್ಚಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದ ಮೋದಿ,ಅಮೆರಿಕದ ಸ್ವಾತಂತ್ರ್ಯ ಪ್ರತಿಮೆಯು ಪ್ರತಿದಿನ ಸರಾಸರಿ 10,000 ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ಆದರೆ ಅದು 133 ವರ್ಷಗಳ ಹಿಂದೆ ನಿರ್ಮಾಣಗೊಂಡಿತ್ತು ಎನ್ನುವುದನ್ನು ಗಮನಿಸಬೇಕು. ಏಕತಾ ಪ್ರತಿಮೆಯು ಕೇವಲ 11 ತಿಂಗಳುಗಳಷ್ಟು ಹಳೆಯದಾಗಿದೆ. ಆದಾಗ್ಯೂ ಇದು ಪ್ರತಿದಿನ 8,500ಕ್ಕೂ ಅಧಿಕ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ಇದೊಂದು ಪವಾಡವಾಗಿದೆ ಎಂದರು.

ನ್ಯೂಯಾರ್ಕ್ ಹಾರ್ಬರ್‌ನ ಲಿಬರ್ಟಿ ಐಲಂಡ್‌ನಲ್ಲಿರುವ 92 ಮೀ.ಎತ್ತರದ ಸ್ವಾತಂತ್ರ್ಯ ಪ್ರತಿಮೆಯು 1886,ಅ.28ರಂದು ಉದ್ಘಾಟನೆಗೊಂಡಿತ್ತು.

ವಾರಾಂತ್ಯಗಳಲ್ಲಿ ಗರಿಷ್ಠ ಸಂಖ್ಯೆಯ ಜನರು ಏಕತಾ ಪ್ರತಿಮೆಗೆ ಭೇಟಿ ನೀಡುತ್ತಿದ್ದಾರೆ. ಅನಾವರಣಗೊಂಡ ಮೊದಲ 11 ದಿನಗಳಲ್ಲಿಯೇ 1,28,000 ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡಿದ್ದರು. ಹೆಚ್ಚೆಚ್ಚು ಪ್ರವಾಸಿಗಳನ್ನು ಸೆಳೆಯಲು ಸರಕಾರವು ಇನ್ನಷ್ಟು ಆಕರ್ಷಣೆಗಳನ್ನು ಸೇರ್ಪಡೆಗೊಳಿಸುತ್ತಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಅಮೆರಿಕದ ಟೈಮ್ಸ್ ಮ್ಯಾಗಝಿನ್ 2019ನೇ ಸಾಲಿನ ವಿಶ್ವದ 100 ಅತ್ಯುತ್ತಮ ತಾಣಗಳ ಪಟ್ಟಿಯಲ್ಲಿ ಏಕತಾ ವಿಗ್ರಹವನ್ನು ಸೇರ್ಪಡೆಗೊಳಿಸಿರುವ ಬಗ್ಗೆ ಮೋದಿ ಇತ್ತೀಚಿಗೆ ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News