18 ತಿಂಗಳ ಒಳಗೆ ಜಮ್ಮುಕಾಶ್ಮೀರ ನಾಯಕರ ಬಿಡುಗಡೆ: ಕೇಂದ್ರ ಸಚಿವ

Update: 2019-09-18 17:09 GMT

ಹೊಸದಿಲ್ಲಿ, ಸೆ. 18: ಗೃಹ ಬಂಧನದಲ್ಲಿ ಇರುವ ಜಮ್ಮು ಹಾಗೂ ಕಾಶ್ಮೀರದ ನಾಯಕರನ್ನು 18 ತಿಂಗಳ ಒಳಗೆ ಖಂಡಿತ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರದ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭ 1975 ಹಾಗೂ 1977ರ ನಡುವೆ ಕಾಂಗ್ರೆಸ್ ಜನರ ಹಕ್ಕುಗಳನ್ನು ರದ್ದುಗೊಳಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿತೇಂದ್ರ ಸಿಂಗ್, ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಆಗಸ್ಟ್ 4ರಿಂದ ಗೃಹ ಬಂಧನದಲ್ಲಿರುವ ನಾಯಕರನ್ನು ಬಿಡುಗಡೆಗೊಳಿಸಲು 18 ತಿಂಗಳಿಗಿಂತ ಕಡಿಮೆ ಸಮಯ ಮಿತಿ ನಿಗದಿಪಡಿಸಲಾಗಿದೆ ಎಂದರು.

ಬಂಧಿತ ನಾಯಕರಲ್ಲಿ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಪಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಹಾಗೂ ಉಮರ್ ಅಬ್ದುಲ್ಲಾ ಸೇರಿದ್ದಾರೆ. ಯಾವುದೇ ವ್ಯಕ್ತಿಯನ್ನು ವಿಚಾರಣೆ ನಡೆಸದೆ ಎರಡು ವರ್ಷಗಳ ಕಾಲ ವಶದಲ್ಲಿ ಇರಿಸಲು ಸಾಧ್ಯವಾಗುವ ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್‌ಎ) ಅಡಿ ಫಾರೂಕ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಜಮ್ಮು ಹಾಗೂ ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಸ್ಥಾನ ಮಾನದ ಕುರಿತು ಪಕ್ಷದ ನಿಲುವನ್ನು ಪುನರುಚ್ಚರಿಸಿದ ಜಿತೇಂದ್ರ ಸಿಂಗ್, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಕೂಡಲೇ ಕೇಂದ್ರಾಡಳಿತ ಪ್ರದೇಶದ ಸ್ಥಾನ ಮಾನ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News