''ನಾಝಿ, ನಾಝಿ ನಾಝಿ'': ಫಾರೂಕ್ ಅಬ್ದುಲ್ಲಾ ಬಂಧನದ ಬಗ್ಗೆ ಕಾರ್ತಿ ಚಿದಂಬರಂ ಟ್ವೀಟ್

Update: 2019-09-18 17:13 GMT

ಹೊಸದಿಲ್ಲಿ, ಸೆ. 18: ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಕಠಿಣ ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್‌ಎ) ಅಡಿ ಗೃಹ ಬಂಧನದಲ್ಲಿ ಇರಿಸಿರುವುದನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಖಂಡಿಸಿದ್ದಾರೆ. ಏಕೀಕೃತ ಭಾರತದ ಬಗ್ಗೆ ಫಾರೂಕ್ ಅಬ್ದುಲ್ಲಾ ಅವರಿಗೆ ಇರುವಷ್ಟು ಒಲವು ಜಮ್ಮು ಕಾಶ್ಮೀರದಲ್ಲಿ ಬೇರೆ ಯಾರಿಗೂ ಇಲ್ಲ ಎಂದು ಅವರು ಹೇಳಿದ್ದಾರೆ.

''ನನ್ನ ಪರವಾಗಿ ಈ ಕೆಳಗಿನವುಗಳನ್ನು ಟ್ವೀಟ್ ಮಾಡುವಂತೆ ನಾನು ನನ್ನ ಕುಟುಂಬದಲ್ಲಿ ವಿನಂತಿಸಿದ್ದೇನೆ: ಪಿಎಸ್‌ಎ ಅಡಿಯಲ್ಲಿ ಫಾರೂಕ್ ಅಬ್ದುಲ್ಲಾ ಅವರನ್ನು ವಶದಲ್ಲಿ ಇರಿಸಿರುವುದನ್ನು ನಾನು ಖಂಡಿಸುತ್ತೇನೆ. ಜಮ್ಮು ಹಾಗೂ ಕಾಶ್ಮೀರ ಅವಿಭಾಜ್ಯ ಅಂಗವಾಗಿರುವ ಏಕೀಕೃತ ಭಾರತದ ಬಗ್ಗೆ ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಅವರಿಗೆ ಇರುವಷ್ಟು ಒಲವು ಬೇರೆ ಯಾರಿಗೂ ಇಲ್ಲ'' ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ ಚಿದಂಬರಂ, ಸ್ವಾತಂತ್ರ ಹೋರಾಟ ಎಂದಿಗೂ ಅಂತ್ಯಗೊಳ್ಳದ ಪ್ರಕ್ರಿಯೆ ಎಂದಿದ್ದಾರೆ. ಅಲ್ಲದೆ, ವಿಶ್ವದಾದ್ಯಂತ ನಡೆದ ಸಾರ್ವಜನಿಕ ಚಳವಳಿಯನ್ನು ಉಲ್ಲೇಖಿಸಿದ್ದಾರೆ. ''ಜಗತ್ತಿನಾದ್ಯಂತದ ಮಾಸ್ಕೊ, ಹಾಂಗ್‌ಕಾಂಗ್, ಫ್ರಾನ್ಸ್, ಸ್ಲೊವೇಕಿಯಾ, ಅಲ್ಜೀರಿಯಾ, ಮ್ಯಾನ್ಮಾರ್, ರೊಮಾನಿಯಾ ಹಾಗೂ ಇತರ ದೇಶಗಳ ಪ್ರತಿಭಟನ ಚಳವಳಿ ಕುರಿತ ಸುದ್ದಿ ಕಥೆಗಳನ್ನು ನಾನು ಓದಿದ್ದೇನೆ'' ಎಂದು ಚಿದಂಬರಂ ಹೇಳಿದರು. ಫಾರೂಕ್ ಅಬ್ದುಲ್ಲಾ ಅವರ ಗೃಹ ಬಂಧನದ ಬಗೆಗಿನ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಚಿದಂಬರಂ ಅವರ ಪುತ್ರ ಹಾಗೂ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ''ನಾಝಿ, ನಾಝಿ, ನಾಝಿ'' ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News