ತೈಲ ಸ್ಥಾವರಗಳ ಮೇಲೆ ನಡೆದ ಡ್ರೋನ್ ದಾಳಿಯ ತನಿಖೆ: ಸೌದಿಗೆ ಫ್ರಾನ್ಸ್ ಪರಿಣತರು

Update: 2019-09-18 15:51 GMT

ಪ್ಯಾರಿಸ್, ಸೆ. 18: ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಗಳ ಮೂಲವನ್ನು ಪತ್ತೆಹಚ್ಚಲು ಫ್ರಾನ್ಸ್ ಸೌದಿ ಅರೇಬಿಯಕ್ಕೆ ಪರಿಣತರನ್ನು ಕಳುಹಿಸಿಕೊಡಲಿದೆ ಎಂದು ಫ್ರಾನ್ಸ್ ಅಧ್ಯಕ್ಷರ ಕಚೇರಿ ಬುಧವಾರ ತಿಳಿಸಿದೆ.

ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಮತ್ತು ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನಡುವೆ ಟೆಲಿಫೋನ್ ಮಾತುಕತೆ ನಡೆದ ಬಳಿಕ ಫ್ರಾನ್ಸ್ ಅಧ್ಯಕ್ಷರ ಕಚೇರಿ ಈ ಘೋಷಣೆಯನ್ನು ಮಾಡಿದೆ.

ಟೆಲಿಫೋನ್ ಮಾತುಕತೆಯ ವೇಳೆ, ಮ್ಯಾಕ್ರೋನ್ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಯನ್ನು ‘ಬಲವಾಗಿ ಖಂಡಿಸಿದರು’ ಹಾಗೂ ‘‘ಈ ಸಂಕಷ್ಟದ ಸಮಯದಲ್ಲಿ ಫ್ರಾನ್ಸ್ ಸೌದಿ ಅರೇಬಿಯದ ಜೊತೆ ನಿಲ್ಲುವುದಾಗಿ ಫ್ರಾನ್ಸ್ ಅಧ್ಯಕ್ಷರು ಸೌದಿ ಯುವರಾಜಗೆ ಭರವಸೆ ನೀಡಿದರು’’ ಎಂದು ‘ಎಲೈಸೀ’ ಅರಮನೆ ನೀಡಿದ ಹೇಳಿಕೆ ತಿಳಿಸಿದೆ.

‘‘ಸೌದಿ ಅಧಿಕಾರಿಗಳ ಬೇಡಿಕೆಗೆ ಪ್ರತಿಯಾಗಿ, ಸೆಪ್ಟಂಬರ್ 14ರಂದು ನಡೆದ ದಾಳಿಗಳ ಮೂಲ ಮತ್ತು ಸ್ವರೂಪದ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ಹೊಂದಿದ ತನಿಖೆಯಲ್ಲಿ ಭಾಗವಹಿಸುವುದಕ್ಕಾಗಿ ಫ್ರಾನ್ಸ್ ಪರಿಣತರನ್ನು ಕಳುಹಿಸಿಕೊಡಲಿದೆ ಎಂಬ ಭರವಸೆಯನ್ನು ಮ್ಯಾಕ್ರೋನ್ ಸೌದಿ ಯುವರಾಜಗೆ ನೀಡಿದರು’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News