ಸೌದಿ ಮೇಲೆ ಯೆಮನ್ ಜನರಿಂದ ‘ಎಚ್ಚರಿಕೆ’ ದಾಳಿ: ಇರಾನ್ ಅಧ್ಯಕ್ಷ ರೂಹಾನಿ

Update: 2019-09-18 17:26 GMT

ಟೆಹರಾನ್, ಸೆ. 18: ಸಂಘರ್ಷಪೀಡಿತ ಯೆಮನ್ ದೇಶದಲ್ಲಿ ಅಮೆರಿಕದ ಬೆಂಬಲದೊಂದಿಗೆ ಸೌದಿ ಅರೇಬಿಯ ಮಧ್ಯಪ್ರವೇಶಿಸಿರುವುದಕ್ಕೆ ಪ್ರತಿಯಾಗಿ, ಸಂಭಾವ್ಯ ಬೃಹತ್ ಯುದ್ಧದ ‘ಎಚ್ಚರಿಕೆ’ಯೆಂಬಂತೆ ಯೆಮನ್ ಜನರು ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಬುಧವಾರ ಹೇಳಿದ್ದಾರೆ.

‘‘ಯೆಮನ್ ಜನರು ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ, ಅವರು ಶಾಲೆಯ ಮೇಲೆ ಆಕ್ರಮಣ ಮಾಡಿಲ್ಲ, ಅವರು ಸನಾ ಬಝಾರ್ ಮೇಲೆ ದಾಳಿ ನಡೆಸಿಲ್ಲ. ಅವರು ನಿಮಗೆ ಎಚ್ಚರಿಕೆ ನೀಡುವುದಕ್ಕಾಗಿ ಕೈಗಾರಿಕಾ ಕೇಂದ್ರವೊಂದರ ಮೇಲೆ ದಾಳಿ ನಡೆಸಿದ್ದಾರೆ’’ ಎಂದು ಸಚಿವ ಸಂಪುಟ ಸಭೆಯ ಬಳಿಕ ರೂಹಾನಿ ಹೇಳಿದರು.

‘‘ಈ ಎಚ್ಚರಿಕೆಯಿಂದ ಪಾಠ ಕಲಿಯಿರಿ ಹಾಗೂ ಈ ವಲಯದಲ್ಲಿ ಯುದ್ಧ ನಡೆಯಬಹುದು ಎಂಬ ಸಾಧ್ಯತೆಯನ್ನು ಪರಿಗಣಿಸಿ’’ ಎಂದು ಅವರು ನುಡಿದರು. ಅವರು ಸೌದಿ ಅರೇಬಿಯದ ಆಡಳಿತಗಾರರನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳಿದ್ದಾರೆ ಎಂದು ಭಾವಿಸಲಾಗಿದೆ.

 ಶನಿವಾರ ಮುಂಜಾನೆ ಸೌದಿ ಅರೇಬಿಯ ಅರಾಮ್ಕೊ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಯ ಹೊಣೆಯನ್ನು ಯೆಮನ್‌ನ ಹೌದಿ ಬಂಡುಕೋರರು ಹೊತ್ತುಕೊಂಡಿದ್ದಾರೆ. ಆದರೆ, ದಾಳಿಗಳಲ್ಲಿ ಇರಾನ್‌ನ ಕ್ರೂಸ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂಬ ನಿರ್ಧಾರಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಡಳಿತ ಬಂದಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

► ದಾಳಿಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆಗೆ ಅಮೆರಿಕ ಕರೆ

ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಗಳಿಗೆ ಪ್ರತಿಕ್ರಿಯಿಸುವಂತೆ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕರೆ ನೀಡಿದ್ದಾರೆ. ಆದರೆ, ಭದ್ರತಾ ಮಂಡಳಿಯು ಯಾವ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಬಯಸಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

‘‘ಇದರಲ್ಲಿ ವಿಶ್ವಸಂಸ್ಥೆಗೆ ವಹಿಸಲು ಪಾತ್ರವಿದೆ ಎಂದು ನಾವು ಭಾವಿಸಿದ್ದೇವೆ. ಸೌದಿ ಅರೇಬಿಯದ ಮೇಲೆ ದಾಳಿ ನಡೆಸಲಾಗಿದೆ. ಹಾಗಾಗಿ, ಅವರು ಭದ್ರತಾ ಮಂಡಳಿಯ ಮೊರೆ ಹೋಗಿರುವುದು ಸರಿಯಾಗಿದೆ. ಆದರೆ, ಮೊದಲು ನಾವು ಸರಿಯಾದ ಮಾಹಿತಿಯನ್ನು ಪಡೆಯಬೇಕಾಗಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News