ಇಸ್ರೇಲ್ ಚುನಾವಣೆ: ಮತ್ತೆ ಅತಂತ್ರ ಫಲಿತಾಂಶ

Update: 2019-09-18 16:00 GMT

ಟೆಲ್ ಅವೀವ್ (ಇಸ್ರೇಲ್), ಸೆ. 18: ಇಸ್ರೇಲ್‌ನಲ್ಲಿ ಮಂಗಳವಾರ ನಡೆದ ಸಂಸದೀಯ ಚುನಾವಣೆಯ ಆಂಶಿಕ ಫಲಿತಾಂಶ ಬುಧವಾರ ಹೊರಬಿದ್ದಿದ್ದು, 91 ಶೇಕಡ ಮತಗಳ ಎಣಿಕೆ ಮುಗಿದಾಗ ಬೆನ್ನಿ ಗಾಂಟ್ಝ್ ಅವರ ಬ್ಲೂ ಆ್ಯಂಡ್ ವೈಟ್ ಪಕ್ಷದ ನೇತೃತ್ವದ ಕಹೋಲ್ ಲಾವನ್ ಒಕ್ಕೂಟವು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷಕ್ಕಿಂತ ಮುಂದಿದೆ.

ಸಂಸತ್ತು ‘ಕ್ನೆಸೆಟ್’ನಲ್ಲಿ ಬಹುಮತ ಪಡೆಯುವ ನಿಟ್ಟಿನಲ್ಲಿ ಯಾವುದೇ ಪಕ್ಷವು ಮುಂದುವರಿಯುತ್ತಿಲ್ಲ ಎನ್ನುವುದನ್ನು ಫಲಿತಾಂಶವು ತೋರಿಸಿದೆ.

ಲಭ್ಯವಾಗಿರುವ ಫಲಿತಾಶಂದ ಪ್ರಕಾರ, ಕಹೋಲ್ ಲಾವನ್ ಸಂಸತ್ತಿನ 120 ಸ್ಥಾನಗಳ ಪೈಕಿ 32ನ್ನು ಗೆದ್ದುಕೊಂಡಿದ್ದರೆ, ಲಿಕುಡ್ ಪಕ್ಷವು 31 ಸ್ಥಾನಗಳೊಂದಿಗೆ ಅದರ ಬೆನ್ನ ಹಿಂದೆಯೇ ಇದೆ.

ನೆತನ್ಯಾಹು ಅವರ ಬಲಪಂಥೀಯ ಮತ್ತು ಕಡು ಸಾಂಪ್ರದಾಯಿಕ ಪಕ್ಷಗಳ ಒಕ್ಕೂಟವು 55 ಸ್ಥಾನಗಳನ್ನು ಗಳಿಸಿದೆ. ಅದೇ ವೇಳೆ, ಬೆನ್ನಿ ಗಾಂಟ್ಝ್‌ರ ಮಧ್ಯ-ಎಡ ಪಕ್ಷಗಳ ಒಕ್ಕೂಟವು 56 ಸ್ಥಾನಗಳನ್ನು ಪಡೆದಿದೆ.

ಅವಿಗ್ಡರ್ ಲೈಬರ್‌ಮನ್ ಅವರ ಯಿಸ್ರೇಲ್ ಬೈಟೀನು ಪಕ್ಷವು 9 ಸ್ಥಾನಗಳಲ್ಲಿ ಮುಂದಿದೆ ಹಾಗೂ ಅದು ಮುಂದಿನ ಸರಕಾರದ ಕಿಂಗ್‌ಮೇಕರ್ ಆಗಬಹುದಾಗಿದೆ.

ಅವಿಗ್ಡರ್ ಲೈಬರ್‌ಮನ್ ಬುಧವಾರ ಬೆಳಗ್ಗೆ ಯಿಸ್ರೇಲ್ ಬೈಟೀನು, ಲಿಕುಡ್ ಮತ್ತು ಕಹೋಲ್ ಲಾವನ್ ಒಕ್ಕೂಟಗಳನ್ನು ಒಳಗೊಂಡ ‘ವಿಶಾಲ ಉದಾರವಾದಿ ಏಕತಾ ಸರಕಾರ’ವೊಂದರ ರಚನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಂಸತ್ತಿಗೆ ಪ್ರವೇಶ ಪಡೆದಿರುವ ಮೂರನೇ ಅತಿ ದೊಡ್ಡ ಘಟಕವೆಂದರೆ ‘ಜಾಯಿಂಟ್ ಲಿಸ್ಟ್ ಆಫ್ ಅರಬ್’ ಪಕ್ಷಗಳು. ಅವುಗಳು 13 ಸ್ಥಾನಗಳನ್ನು ಪಡೆದಿವೆ.

ಈ ವರ್ಷದ ಎಪ್ರಿಲ್‌ನಲ್ಲಿ ಸಂಸತ್ತಿಗೆ ನಡೆದ ಚುನಾವಣೆಯಲ್ಲೂ ಅತಂತ್ರ ಫಲಿತಾಂಶ ಬಂದಿತ್ತು. ಅಂದು ಸರಕಾರವೊಂದನ್ನು ರಚಿಸಲು ಬೆಂಜಮಿನ್ ನೆತನ್ಯಾಹು ವಿಫಲವಾದ ಹಿನ್ನೆಲೆಯಲ್ಲಿ, ಮೇ 30ರಂದು ಸ್ವತಃ ಸಂಸತ್ತು ತನ್ನನ್ನು ತಾನು ವಿಸರ್ಜನೆಗೊಳಿಸಿತ್ತು. ಅದರ ಪರಿಣಾಮವಾಗಿ ಮಂಗಳವಾರ ಮರುಚುನಾವಣೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News