ದೇಶವ್ಯಾಪಿ ಎನ್‌ಆರ್‌ಸಿ ಜಾರಿ: ಅಮಿತ್ ಶಾ

Update: 2019-09-18 16:33 GMT

ರಾಂಚಿ, ಸೆ.18: ಕೇಂದ್ರ ಸರಕಾರ ದೇಶವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯನ್ನು ಜಾರಿಗೊಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಾಂಚಿಯಲ್ಲಿ ಹಿಂದಿ ದಿನ ಪತ್ರಿಕೆ ‘ಹಿಂದುಸ್ತಾನ್’ ಆಯೋಜಿಸಿದ್ದ ಪೂರ್ವೋದಯ ಹಿಂದುಸ್ತಾನ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಕ್ರಮ ನಿವಾಸಿಗಳನ್ನು ಪತ್ತೆಹಚ್ಚಲು ಎನ್‌ಆರ್‌ಸಿ ಅತ್ಯಗತ್ಯ ಎಂದರು. ಓರ್ವ ಭಾರತೀಯ ಅಮೆರಿಕ, ಬ್ರಿಟನ್ ಅಥವಾ ರಶ್ಯಾಕ್ಕೆ ಹೋಗಿ ಅಲ್ಲಿ ಅಕ್ರಮವಾಗಿ ನೆಲೆಸಲು ಸಾಧ್ಯವಿಲ್ಲ. ಹಾಗಿರುವಾಗ ಇತರ ದೇಶದ ನಾಗರಿಕರು ಸಕ್ರಮ ದಾಖಲೆಪತ್ರಗಳಿಲ್ಲದೆ ಭಾರತದಲ್ಲಿ ವಾಸಿಸಲು ಹೇಗೆ ಸಾಧ್ಯ. ಆದ್ದರಿಂದಲೇ ದೇಶವ್ಯಾಪಿ ಎನ್‌ಆರ್‌ಸಿಯ ಅಗತ್ಯವಿದೆ ಎಂದು ಶಾ ಹೇಳಿದರು.

ಎನ್‌ಆರ್‌ಸಿಯನ್ನು ದೇಶದ ಇತರೆಡೆಗೆ ವಿಸ್ತರಿಸಿ ರಾಷ್ಟ್ರೀಯ ಪೌರತ್ವ ದಾಖಲೆಯನ್ನು ರಚಿಸಲಿದ್ದೇವೆ. ದೇಶದ ಎಲ್ಲಾ ನಾಗರಿಕರ ಪಟ್ಟಿಯ ಅಗತ್ಯವಿದೆ. ಇದಕ್ಕಾಗಿ ಎನ್‌ಆರ್‌ಸಿ ಯ ಅಗತ್ಯವಿದೆ ಎಂದು ಶಾ ಪ್ರತಿಪಾದಿಸಿದರು.

ಎನ್‌ಆರ್‌ಸಿಯ ಪ್ರಬಲ ಪ್ರತಿಪಾದಕನಾಗಿರುವ ಶಾ, ಒಳನುಸುಳುಕೋರರು ಗೆದ್ದಲು ಹುಳಗಳಂತೆ ದೇಶವನ್ನು ನಾಶಗೊಳಿಸುತ್ತಾರೆ. ಅವರನ್ನು ದೇಶದಿಂದ ಹೊರದೂಡಬೇಕು ಎಂದು ಹಲವಾರು ಬಾರಿ ಹೇಳಿಕೆ ನೀಡಿದ್ದರು. ಈ ತಿಂಗಳ ಆರಂಭದಲ್ಲಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ್ದ ಅಮಿತ್ ಶಾ, ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸರಕಾರ ಮತ್ತೊಮ್ಮೆ ಮಂಡಿಸಲಿದೆ ಎಂದು ಹೇಳಿಕೆ ನೀಡಿದ್ದರು. ಈ ಮಸೂದೆಯು ಬಾಂಗ್ಲಾ, ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ಹಿಂದು, ಸಿಖ್ ಮತ್ತು ಬೌದ್ಧ ಧರ್ಮೀಯರು ಭಾರತದ ಪೌರತ್ವ ಪಡೆಯುವ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುತ್ತದೆ. ಕಳೆದ ಫೆಬ್ರವರಿಯಲ್ಲಿ ಈ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿರಲಿಲ್ಲ. ಮಸೂದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News