ದಿಲ್ಲಿಯಲ್ಲಿ ಸಮ-ಬೆಸ ಸಂಖ್ಯೆ ಯೋಜನೆ ಜಾರಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

Update: 2019-09-18 17:42 GMT

ಹೊಸದಿಲ್ಲಿ, ಸೆ.18: ದಿಲ್ಲಿಯಲ್ಲಿ ವಾಹನ ಸಂಚಾರಕ್ಕೆ ನವೆಂಬರ್ 4ರಿಂದ 15ರವರೆಗೆ ಸಮ-ಬೆಸ ಯೋಜನೆ ಜಾರಿಗೊಳಿಸಲು ನಿರ್ಧರಿಸಿರುವ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತಿರಸ್ಕರಿಸಿದೆ. 2016ರಲ್ಲಿ ಪ್ರಥಮ ಬಾರಿಗೆ ದಿಲ್ಲಿಯಲ್ಲಿ ಸಮ ಬೆಸ ಸಂಖ್ಯೆಯ ವಾಹನ ಸಂಚಾರ ಯೋಜನೆ ಜಾರಿಗೊಳಿಸಿದ ಬಳಿಕವೂ ವಾಯುಮಾಲಿನ್ಯ ಸಮಸ್ಯೆ ಕಡಿಮೆಯಾಗಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಯ ವರದಿ ತಿಳಿಸಿದೆ. ಆದ್ದರಿಂದ ಇತರ ದೇಶಗಳ ಜನರು ನಡೆಸಿದ ಅಧ್ಯಯನದ ಆಧಾರದಲ್ಲಿ ಸಮ-ಬೆಸ ಯೋಜನೆಯನ್ನು ನಮ್ಮ ದೇಶದಲ್ಲಿ ಜಾರಿಗೊಳಿಸುವುದು ಅಹಿತಕರವಾಗಿದೆ ಹಾಗೂ ಸಿಪಿಸಿಬಿಯಂತಹ ಸಂಸ್ಥೆಗಳಿಗೆ ಅಪಖ್ಯಾತಿ ತರುತ್ತದೆ . ಆದ್ದರಿಂದ ಸರಕಾರದ ನಿರ್ಧಾರಕ್ಕೆ ತಡೆನೀಡಬೇಕು ಹಾಗೂ , ವಿದೇಶದಲ್ಲಿ ನಡೆಸಿರುವ ಅಧ್ಯಯನದ ವರದಿಯ ಪರಿಶೀಲನೆಗೆ ಹಿರಿಯ ವಿಜ್ಞಾನಿಗಳ ನೇತೃತ್ವದ ಸಮಿತಿಯನ್ನು ರಚಿಸಲು ಸೂಚಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ವಕೀಲ ಗೌರವ್ ಕುಮಾರ್ ಬನ್ಸಾಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ. ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News