ಮೋದಿ ಜನ್ಮದಿನದ ಸಂಭ್ರಮಾಚರಣೆಗೆ ಜಲಾಶಯದ ನೀರಿನ ಮಟ್ಟ ಹೆಚ್ಚಳ: ಮೇಧಾ ಪಾಟ್ಕರ್ ಟೀಕೆ

Update: 2019-09-18 17:46 GMT

ಹೊಸದಿಲ್ಲಿ, ಸೆ.18: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಆಚರಣೆಯ ಸಂಭ್ರಮದಲ್ಲಿ ಗುಜರಾತ್‌ನ ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾದವರ ಅಳಲು ಮಹತ್ವ ಕಳೆದುಕೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಹೇಳಿದ್ದಾರೆ.

ನರ್ಮದಾ ಜಲಾಶಯವನ್ನು ಇದೇ ಪ್ರಥಮ ಬಾರಿಗೆ ರವಿವಾರ 138.68 ಅಡಿ ಸಂಪೂರ್ಣ ಮಟ್ಟಕ್ಕೇರಿಸಲಾಗಿದೆ. ಇದರಿಂದ ಸುಮಾರು 192 ಗ್ರಾಮಗಳು ನೀರಿನಲ್ಲಿ ಮುಳುಗಿದೆ ಎಂದು ವರದಿಯಾಗಿದೆ.

ಗುಜರಾತ್ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ಪ್ರಧಾನಿ ಮೋದಿಯವರ ಜನ್ಮದಿನದ ಸಂಭ್ರಮಾಚರಣೆಯ ಕಾರಣಕ್ಕೆ ಜಲಾಶಯದ ನೀರಿನ ಮಟ್ಟವನ್ನು 139 ಮೀಟರ್‌ಗೆ ಹೆಚ್ಚಿಸಿದ್ದಾರೆ. ಸಂಭ್ರಮಾಚರಣೆಯನ್ನು ನಾವು ಖಂಡಿಸುತ್ತೇವೆ. ಪ್ರಧಾನಿಗೆ ದೀರ್ಘಾಯಸ್ಸು ಕೋರುತ್ತೇವೆ. ಆದರೆ ಅವರು ತನ್ನ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತುಕೊಂಡು ಇತರರನ್ನೂ ಬದುಕಲು ಬಿಡಬೇಕು ಎಂದು ಮೇಧಾ ಪಾಟ್ಕರ್ ಹೇಳಿದ್ದಾರೆ.

ಜಲಾಶಯ ಅಕ್ಟೋಬರ್ 15ರ ವೇಳೆ ತುಂಬಲಿದೆ ಎಂದು ಗುಜರಾತ್ ಸರಕಾರ ಮೊದಲು ಹೇಳಿತ್ತು. ಬಳಿಕ ಸೆ.30ರ ಹೊಸ ದಿನಾಂಕ ಪ್ರಕಟಿಸಿತು. ಆದರೆ ಇದೀಗ ಏಕಾಏಕಿ ಪ್ರಧಾನಿಯ ಜನ್ಮದಿನವಾದ ಸೆ.17ರಂದೇ ಜಲಾಶಯವನ್ನು ತುಂಬಿಸಲಾಗಿದೆ. ಅವರು ಸಂವಿಧಾನವನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಸಾವಿರಾರು ಜನರು ಮುಳುಗಿದರೂ ಪರವಾಗಿಲ್ಲ, ಒಬ್ಬ ವ್ಯಕ್ತಿಗಾಗಿ ಅಣೆಕಟ್ಟು ತುಂಬಿಸಲಾಗಿದೆ . ಎರಡು ದಶಕಗಳಾದರೂ ಯೋಜನೆಯಿಂದ ಸಂತ್ರಸ್ತರಾದ ಒಬ್ಬ ವ್ಯಕ್ತಿಯನ್ನೂ ಭೇಟಿಯಾಗಲು ಅವರಿಗೆ (ಮೋದಿಗೆ) ಆಗಲಿಲ್ಲ. ಇದಿಷ್ಟೇ ಸಾಕು ಅವರ ಬಗ್ಗೆ ಹೇಳಲು ಎಂದು ಪಾಟ್ಕರ್ ಟ್ವೀಟ್ ಮಾಡಿದ್ದಾರೆ. ಜಲಾಶಯವನ್ನು ಪೂರ್ಣ ಮಟ್ಟಕ್ಕೇರಿಸುವ ಸರಕಾರದ ನಿರ್ಧಾರವನ್ನು ಪಾಟ್ಕರ್ ನೇತೃತ್ವದ ನರ್ಮದಾ ಬಚಾವೊ ಆಂದೋಲನ ಸಮಿತಿ ವಿರೋಧಿಸಿತ್ತು. ಸುಪ್ರೀಂಕೋರ್ಟ್‌ನ ಆದೇಶದ ಹೊರತಾಗಿಯೂ ಸರ್ದಾರ್ ಸರೋವರ್ ಅಣೆಕಟ್ಟೆ ಯೋಜನೆಯಿಂದ ಸಂತ್ರಸ್ತರಾದವರಿಗೆ ಇನ್ನೂ ಪರಿಹಾರ ಒದಗಿಸಿಲ್ಲ ಅಥವಾ ಸಂಪೂರ್ಣವಾಗಿ ಪುನರ್ವಸತಿ ಕಲ್ಪಿಸಿಲ್ಲ ಎಂದು ಮೇಧಾ ಪಾಟ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News