ಎನ್‌ಆರ್‌ಸಿ : ಸುಪ್ರೀಂ ಮೊರೆಹೋದ ತೃತೀಯ ಲಿಂಗಿಗಳು

Update: 2019-09-18 17:47 GMT

ಗುವಾಹಟಿ, ಸೆ.18: ಎನ್‌ಆರ್‌ಸಿ(ರಾಷ್ಟ್ರೀಯ ಪೌರರ ನೋಂದಣಿ) ಪಟ್ಟಿಯಿಂದ 2000 ತೃತೀಯ ಲಿಂಗಿಗಳ ಹೆಸರು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಎನ್‌ಆರ್‌ಸಿ ಒಂದು ವಿಸ್ತೃತ (ಎಲ್ಲರನ್ನೂ ಒಳಗೊಂಡ) ದಾಖಲೀಕರಣ ಪ್ರಕ್ರಿಯೆಯಲ್ಲ. ಬಹುತೇಕ ತೃತೀಯ ಲಿಂಗಿಗಳ ಹೆಸರನ್ನು ಕೈಬಿಡಲಾಗಿದೆ. 1971ಕ್ಕೂ ಮೊದಲಿಗೆ ಅನ್ವಯಿಸುವ ದಾಖಲೆಪತ್ರಗಳು ಅವರಲ್ಲಿಲ್ಲ. ಆಕ್ಷೇಪಣೆ ಸಲ್ಲಿಸುವ ಅರ್ಜಿಯಲ್ಲಿ ಲಿಂಗ ವಿಭಾಗದಲ್ಲಿ ‘ಇತರರು’ ಎಂಬ ವರ್ಗವನ್ನು ಸೇರಿಸಿಲ್ಲ ಎಂದು ಅರ್ಜಿ ಸಲ್ಲಿಸಿರುವ ನ್ಯಾ. ಸ್ವಾತಿ ಬಿಧಾನ್ ಬರುವಾ ಹೇಳಿದ್ದಾರೆ.

ಸ್ವಾತಿ ರಾಜ್ಯದ ಪ್ರಪ್ರಥಮ ತೃತೀಯ ಲಿಂಗಿ ನ್ಯಾಯಾಧೀಶರಾಗಿದ್ದಾರೆ . ಎನ್‌ಆರ್‌ಸಿಯ ಪ್ರಕಾರ ತೃತೀಯ ಲಿಂಗಿಗಳು ಅರ್ಜಿಯಲ್ಲಿ ಲಿಂಗ ಸೂಚಿಸುವ ಕಾಲಂನಲ್ಲಿ ಮಹಿಳೆ ಅಥವಾ ಪುರುಷ ಎಂದು ಸೂಚಿಸಬೇಕಾಗುತ್ತದೆ. ಈ ಬಗ್ಗೆ ನಮ್ಮ ಆಕ್ಷೇಪವನ್ನು ಅರ್ಜಿಯಲ್ಲಿ ದಾಖಲಿಸಿದ್ದು ನ್ಯಾಯಾಲಯ ಇದನ್ನು ಪರಿಗಣಿಸುವ ನಿರೀಕ್ಷೆಯಿದೆ ಎಂದವರು ಹೇಳಿದ್ದಾರೆ. ಅಸ್ಸಾಂನಲ್ಲಿ ಪೌರತ್ವವನ್ನು ಸಾಬೀತುಪಡಿಸುವ ಪ್ರಕ್ರಿಯೆಯಾದ ಎನ್‌ಆರ್‌ಸಿ ಪಟ್ಟಿ ಯಲ್ಲಿ ಹೆಸರು ಸೇರ್ಪಡೆ ಕೋರಿ ಸುಮಾರು 3.3 ಕೋಟಿ ಜನ ಅರ್ಜಿ ಸಲ್ಲಿಸಿದ್ದು ಆಗಸ್ಟ್ 31ರಂದು ಪ್ರಕಟವಾದ ಅಂತಿಮಪಟ್ಟಿಯಲ್ಲಿ 19 ಲಕ್ಷಕ್ಕೂ ಹೆಚ್ಚು ಮಂದಿಯ ಹೆಸರನ್ನು ಕೈಬಿಡಲಾಗಿದೆ. ಇವರು ಈ ನಿರ್ಧಾರವನ್ನು ವಿದೇಶಿಯರ ನ್ಯಾಯಾಧಿಕರಣದಲ್ಲಿ ಪ್ರಶ್ನಿಸಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News